ಬಿಜೆಪಿಗೆ ಮತ ನೀಡಿ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕುತ್ತೇವೆ: ಅಮಿತ್‌ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿಜೆಪಿಗೆ ಮತ ನೀಡಿ, ಮಮತಾ ಬ್ಯಾನರ್ಜಿ (Mamata Banerjee) ಅವರ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah)ಹೇಳಿದ್ದಾರೆ.

ರಾಯ್‌ಗಂಜ್‌ನ ಬಿಜೆಪಿ ಅಭ್ಯರ್ಥಿ ಕಾರ್ತಿಕ್ ಪಾಲ್‌ ಪರವಾಗಿ ಬಂಗಾಳದ ಉತ್ತರ ದಿನಜ್‌ಪುರ ಜಿಲ್ಲೆಯ ಕರಂಡಿಘಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಟ್ಟುವ ಧೈರ್ಯವಿಲ್ಲ. ಹೊಸ ಕಾನೂನಿನ ಅಡಿಯಲ್ಲಿ ಎಲ್ಲಾ ಹಿಂದು ನಿರಾಶ್ರಿತರಿಗೆ ಪೌರತ್ವ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಮಾ, ಮಾತಿ, ಮಾನುಷ್ ಘೋಷಣೆಯ ಮೇಲೆ ಅಧಿಕಾರಕ್ಕೆ ಬಂದರು. ಸಂದೇಶಖಾಲಿಯಲ್ಲಿ ‘ಮಾ’ರನ್ನು ಹಿಂಸಿಸಲಾಯಿತು. ಮನುಷ್ (ಬ್ಯಾನರ್ಜಿ) ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಬಿಜೆಪಿಗೆ ಮತ ನೀಡಿ, ಮಮತಾ ಬ್ಯಾನರ್ಜಿ ಗೂಂಡಾಗಳನ್ನು ತಲೆ ಕೆಳಗಾಗಿ ನೇತುಹಾಕುತ್ತೇವೆ ಎಂದು ಗುಡುಗಿದರು.

ಮಮತಾ ಬ್ಯಾನರ್ಜಿ ಅವರು ಒಳನುಸುಳುವಿಕೆಯನ್ನು ನಿಲ್ಲಿಸಬಹುದೇ? ಅವರಿಂದ ಸಾಧ್ಯವಿಲ್ಲ. ಮೋದಿಜಿ ಮಾತ್ರ ಒಳನುಸುಳುವಿಕೆಯನ್ನು ತಡೆಯಬಹುದು. ಕಳೆದ ಬಾರಿ 18 ಸೀಟು ಕೊಟ್ಟಿದ್ದೀರಿ. ಮೋದಿ ರಾಮಮಂದಿರ ಕೊಟ್ಟಿದ್ದಾರೆ. ಈ ಬಾರಿ 35 ಸೀಟು ಕೊಡಿ, ನುಸುಳುವುದನ್ನು ನಿಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಸಂದೇಶಖಾಲಿಯಲ್ಲಿ ಮಮತಾ ಬ್ಯಾನರ್ಜಿ ಅವರು ತಮ್ಮ ಮತಬ್ಯಾಂಕ್‌ಗೆ ಧಕ್ಕೆಯಾಗದಂತೆ ಮಹಿಳೆಯರಿಗೆ ಚಿತ್ರಹಿಂಸೆ ನೀಡಲು ಅವಕಾಶ ಮಾಡಿಕೊಟ್ಟರು. ಹೈಕೋರ್ಟ್ ಮಧ್ಯಪ್ರವೇಶಿಸಿತು. ಈಗ ಆರೋಪಿಗಳು ಜೈಲಿನಲ್ಲಿದ್ದಾರೆ ಎಂದು ಹೇಳಿದ್ದಾರೆ.

ಟಿಎಂಸಿ ನಾಯಕರ ಮನೆಗಳನ್ನು ನೋಡಿ. ಹುಲ್ಲಿನ ಛಾವಣಿಯ ಮನೆಗಳಲ್ಲಿ ಇದ್ದವರು ಈಗ ನಾಲ್ಕು ಅಂತಸ್ತಿನ ಮನೆಗಳನ್ನು ಹೊಂದಿದ್ದಾರೆ. ಕಾರುಗಳಲ್ಲಿ ತಿರುಗುತ್ತಾರೆ. ಇದೆಲ್ಲ ನಿಮ್ಮ ಹಣ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತರ ಬಂಗಾಳದಲ್ಲಿ ಕೇಂದ್ರವು ಏಮ್ಸ್ ಸ್ಥಾಪಿಸಲಿದೆ ಎಂದು ಭರವಸೆ ನೀಡಿದ್ದಾರೆ. ಮುಂದುವರಿದು, ನಾವು ರಾಯಗಂಜ್‌ನಲ್ಲಿ ಏಮ್ಸ್ ಯೋಜನೆ ಹಾಕಿದ್ದೆವು. ಮಮತಾ ದೀದಿ ಅದನ್ನು ತಡೆದರು. ನಮಗೆ 30 ಸೀಟುಗಳನ್ನು ಕೊಡಿ, ನಾವು ಉತ್ತರ ಬಂಗಾಳದ ಮೊದಲ ಏಮ್ಸ್‌ನ ಕೆಲಸವನ್ನು ಪ್ರಾರಂಭಿಸುತ್ತೇವೆ. ಇದು ಮೋದಿಜಿಯವರ ಗ್ಯಾರಂಟಿ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!