February 9, 2026
Monday, February 9, 2026
spot_img

ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: 2.89 ಕೋಟಿ ಹೆಸರುಗಳಿಗೆ ಗೇಟ್ ಪಾಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ವಿಶೇಷ ತೀವ್ರ ಪರಿಷ್ಕರಣೆ ನಡೆದ ಬಳಿಕ ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು 2.89 ಕೋಟಿ ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡಿದೆ.

ರಾಜ್ಯದಲ್ಲಿ ಒಟ್ಟು 2.89 ಕೋಟಿ ಮತದಾರರ ಹೆಸರಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. 2.17 ಕೋಟಿ ಜನರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. 46.23 ಲಕ್ಷ ಜನರು ಮೃತಪಟ್ಟಿದ್ದಾರೆ. 25.47 ಲಕ್ಷ ಜನರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅಂತಿಮ ಪಟ್ಟಿಯನ್ನು ಮಾರ್ಚ್ 6 ರಂದು ಪ್ರಕಟಿಸಲಾಗುವುದು.

ಅಧಿಕೃತ ಅಂಕಿಅಂಶಗಳ ಪ್ರಕಾರ, 2025ರ ಅ.27 ರಂದು ಎಸ್‌ಐಆರ್ ಘೋಷಿಸಿದಾಗ ಉತ್ತರ ಪ್ರದೇಶದಲ್ಲಿ ಸುಮಾರು 15.44 ಕೋಟಿ ನೋಂದಾಯಿತ ಮತದಾರರಿದ್ದರು. ಪ್ರತಿ ಮತದಾರರಿಗೂ ವೈಯಕ್ತಿಕ ಎಣಿಕೆ ನಮೂನೆಗಳನ್ನು ಮುದ್ರಿಸಲಾಗುತ್ತಿತ್ತು. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ-ಮನೆಗೆ ಪರಿಶೀಲನೆ ಮತ್ತು ಸಹಿ ಮಾಡಿದ ನಮೂನೆಗಳನ್ನು ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಒಟ್ಟು ಮತದಾರರಲ್ಲಿ, 12,55,56,025 ಎಣಿಕೆ ನಮೂನೆಗಳನ್ನು ಹಿಂತಿರುಗಿಸಲಾಗಿದೆ. ಇದು ಶೇ.81.03 ರಷ್ಟು ಮತದಾರರನ್ನು ಒಳಗೊಂಡಿದೆ. ಆದಾಗ್ಯೂ, ಸುಮಾರು ಶೇಕಡಾ 18.7 ರಷ್ಟು ಮತದಾರರಿಂದ ನಮೂನೆಗಳನ್ನು ಸ್ವೀಕರಿಸಲಾಗಿಲ್ಲ. ಇದರಿಂದಾಗಿ 2.89 ಕೋಟಿ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಗರಿಷ್ಠ ಸಂಖ್ಯೆಯ ಮತದಾರರನ್ನು ಕಳೆದುಕೊಂಡಿದೆ. ಎಸ್‌ಐಆರ್ ಘೋಷಿಸಿದಾಗ, ಲಕ್ನೋದಲ್ಲಿ 39.9 ಲಕ್ಷ ಮತದಾರರಿದ್ದರು. ಅದು ಈಗ 27.9 ಲಕ್ಷಕ್ಕೆ ಇಳಿದಿದೆ. ಅಂದರೆ, ಶೇ.30 ರಷ್ಟು ಇಳಿಕೆ ಕಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲಲಿತಪುರದಲ್ಲಿ 2025ರ ಸೆ.7ರ ಹೊತ್ತಿಗೆ 9.5 ಲಕ್ಷ ಮತದಾರರು ನೋಂದಾಯಿಸಿದ್ದರು. ಅದು ಈಗ 8.6 ಲಕ್ಷಕ್ಕೆ ಇಳಿದಿದೆ. 10% ರಷ್ಟು ಕಡಿಮೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ.

ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಮತದಾರರ ಪಟ್ಟಿ ಪರಿಷ್ಕರಣೆಯು ಮೂರು ಬಾರಿ ವಿಸ್ತರಣೆಗೊಂಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !