ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯು ಅತ್ಯಂತ ವ್ಯವಸ್ಥಿತವಾಗಿ ಸಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿಗಳ ವಿತರಣೆ ಮತ್ತು ಮತಗಟ್ಟೆ ಹಂಚಿಕೆಯಲ್ಲಿ ಯಾವುದೇ ರೀತಿಯ ಲೋಪದೋಷಗಳು ಸಂಭವಿಸಿಲ್ಲ ಎಂದು ಮಾಧ್ಯಮಗಳ ಅನುಮಾನಗಳಿಗೆ ತೆರೆ ಎಳೆದರು. ತಪ್ಪು ವಿಳಾಸ ಅಥವಾ ಇತರೆ ದೂರುಗಳಿದ್ದರೆ ತಕ್ಷಣವೇ ಅವುಗಳನ್ನು ಬಗೆಹರಿಸುವುದಾಗಿ ಅಭಯ ನೀಡಿದರು.
ಗ್ರಾಮೀಣ ಭಾಗದಲ್ಲೇ ಮತದಾರರ ನೆರವು ಕೇಂದ್ರ
ಮತದಾರರ ನೋಂದಣಿ ಹಾಗೂ ತಿದ್ದುಪಡಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪ್ರತಿ ಹಳ್ಳಿಗಳಲ್ಲೇ ವಿಶೇಷ ಮತದಾರರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಇಂಟರ್ನೆಟ್ ಸಂಪರ್ಕ ಅಥವಾ ತಾಂತ್ರಿಕ ತೊಂದರೆ ಎದುರಿಸುತ್ತಿರುವ ಬಿಎಲ್‌ಒ (BLO) ಸಿಬ್ಬಂದಿಗೆ ನೆರವಾಗಲು ಪ್ರತಿ ತಾಲ್ಲೂಕಿನಲ್ಲಿಯೂ ಎರಡರಿಂದ ಮೂರು ತಾಂತ್ರಿಕ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.
ನಗರ ಪ್ರದೇಶಗಳಲ್ಲಿ ವೀಕೆಂಡ್ ವಿಶೇಷ ಅಭಿಯಾನ
ಸಾಮಾನ್ಯ ದಿನಗಳಲ್ಲಿ ಕಚೇರಿ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಗರ ಪ್ರದೇಶದ ಜನರಿಗಾಗಿ ಶನಿವಾರ ಮತ್ತು ಭಾನುವಾರಗಳಂದು ವಿಶೇಷ ಜಾಗೃತಿ ಹಾಗೂ ನೋಂದಣಿ ದಿನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ಮತದಾರನೂ ಸುಲಭವಾಗಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಲು ಎಲ್ಲ ಅಗತ್ಯ ನೆರವು ನೀಡುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಅನ್ಬು ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



