ಕಾಂಗ್ರೆಸ್ ಸರ್ಕಾರ ರಚನೆಯಾದರೆ ವಾಘಾ ಗಡಿ ಓಪನ್: ಪಂಜಾಬ್‌ ಮಾಜಿ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರ ರಚನೆಯಾದರೆ ವಾಘಾ ಗಡಿಯನ್ನು ತೆರೆಯುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಜಲಂಧರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ನಾವು ಜಲಂಧರ್ ಅನ್ನು ವೈದ್ಯಕೀಯ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತೇವೆ ಮತ್ತು ವಾಘಾ ಗಡಿಯನ್ನು ತೆರೆಯುತ್ತೇವೆ ಇದರಿಂದ ಪಾಕಿಸ್ತಾನದ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರಬಹುದುಎಂದು ಹೇಳಿದ್ದಾರೆ.

ವಾಘಾ ಗಡಿಯನ್ನು ತೆರೆಯುವುದರಿಂದ ಪಾಕಿಸ್ತಾನದ ಜನರು ಚಿಕಿತ್ಸೆಗಾಗಿ ಭಾರತಕ್ಕೆ ತಲುಪಲು ಸಾಧ್ಯವಾಗಲಿದೆ ಮತ್ತು ಇದು ಪಂಜಾಬ್‌ನಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ವಾದಿಸಿದರು.

ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ ಚರಣ್‌ಜಿತ್‌ ಸಿಂಗ್‌ ಚನ್ನಿ, ಪ್ರಧಾನಿ ಮೋದಿ ಅವರು ನೀಡಿದ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂದು ಹೇಳಿದರು.

ಪ್ರಧಾನಿಯವರು ಇಲ್ಲಿನ ಜನರಿಗೆ ನಿರಾಸೆ ಮೂಡಿಸಿದ್ದಾರೆ. ಸಮಾವೇಶಕ್ಕೆ 8 ಜಿಲ್ಲೆಯ ಜನರನ್ನು ಕರೆತರುವ ಪ್ರಯತ್ನ ಮಾಡಲಾಗಿತ್ತು. ಆದರೆ, ಇಡೀ ಸಮಾವೇಶ ಪೂರ್ತಿ ಫ್ಲಾಪ್‌ ಆಗಿದೆ. ಮೋದಿ ಏನಾದ್ರೂ ದೊಡ್ಡ ಘೋಷಣೆ ಮಾಡ್ತಾರೆ ಅಂತಾ ನಮ್ಮ ಜನ ನಿರೀಕ್ಷೆಯಲ್ಲಿದ್ದರು. ಆದರೆ, ಮೋದಿ ಏನನ್ನೂ ಘೋಷಣೆ ಮಾಡಿಲ್ಲ. ಜಲಂಧರ್‌ನಲ್ಲಿ ಏಮ್ಸ್‌ ಆರಂಭಿಸೋದಾಗಿ ಹೇಳಿದ್ರು, ಆದ್ರೆ ಅದನ್ನೂ ಮಾಡಿಲ್ಲ. ಇಲ್ಲಿನ ಮುಚ್ಚಿದ ಕಾರ್ಖಾನೆಗಳಿಗೆ ಪ್ಯಾಕೇಜ್‌ ಘೋಷಣೆಯಾದ್ರೂ ಮಾಡ್ತಾರಾ ಅಂದುಕೊಂಡಿದ್ರು ಅದೂ ಕೂಡ ಆಗಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿ ಮಾಡಲಿದೆ ಎಂದರು. ಮೇ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದರು.ಜಲಂಧರ್‌ನಲ್ಲಿ ನಡೆದ ಸಮಾವೇಶದಲ್ಲಿ ಅವರು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಂಜಾಬ್‌ನ 13 ಸ್ಥಾನಗಳಿಗೆ ಜೂನ್ 1 ರಂದು ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಒಟ್ಟು 328 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕೊನೆಯ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ 13 ಸ್ಥಾನಗಳಲ್ಲಿ ಗುರುದಾಸ್‌ಪುರ, ಅಮೃತಸರ, ಖದೂರ್ ಸಾಹಿಬ್, ಜಲಂಧರ್ ಲೋಕಸಭಾ ಕ್ಷೇತ್ರಗಳು ಸೇರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!