ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಘಟನೆ ಅತ್ಯಂತ ಹೀನ ಕೃತ್ಯವಾಗಿದ್ದು, ಇದಕ್ಕೆ ತಕ್ಕ ಪಾಠ ಕಲಿಸಲು ಕೇಂದ್ರ ತಯಾರಿ ನಡೆಸಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಾರ್ವಭೌಮತೆಗೆ ಧಕ್ಕೆ ಬರದಂತೆ ಪ್ರಧಾನಿ ಕ್ರಮ ಕೈಗೊಳ್ಳುತ್ತಿದ್ದಾರೆ. ಕೆಲವು ದಿನ ಕಾದು ನೋಡಿ, ಇನ್ನೂ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ವಿರೋಧ ಪಕ್ಷಗಳಿಗೆ ಟೀಕಿಸುವುದನ್ನು ಬಿಟ್ಟು ಬೇರೇ ಏನೂ ಬರುವುದಿಲ್ಲ. ಪ್ರಧಾನಿ ಬಗ್ಗೆ ಮಾತನಾಡಲು ಅವರ ಬಳಿ ಏನೂ ಇಲ್ಲ ಎಂದರು.
ಹತ್ತು ವರ್ಷದಲ್ಲಿ ಕಾಶ್ಮೀರದಲ್ಲಿ ಪ್ರವಾಸೋದ್ಯಮದಿಂದ ₹8 ಸಾವಿರ ಕೋಟಿ ಆದಾಯ ಬಂದಿದೆ. ಇದನ್ನು ಸಹಿಸಲಾಗದೇ ಪಾಕಿಸ್ತಾನದವರು ಇಂತಹ ಕೃತ್ಯ ಮಾಡಿದ್ದಾರೆ. ಏನೆಲ್ಲ ಹೇಳಿ ಜನರ ದಾರಿ ತಪ್ಪಿಸುವ ಬದಲು ಅಭಿವೃದ್ಧಿಗೆ ಕೈಜೋಡಿಸಿ. ಯಾರೋ ಕೆಲವರು ಪ್ರಚಾರಕ್ಕಾಗಿ ಮಾತನಾಡುತ್ತಾರೆ. ದೇಶವೇ ದೊಡ್ಡದು, ಅದಕ್ಕಿಂತ ನಾವ್ಯಾರೂ ದೊಡ್ಡವರಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದು ನಾಣ್ಯದ ಎರಡು ಮುಖವಾಗಿ ಒಟ್ಟಾಗಿ ಕೆಲಸ ಮಾಡಿದರೆ, ಹೇಗೆಲ್ಲಾ ಕೆಲಸ ಆಗುತ್ತದೆ ಎನ್ನುವುದಕ್ಕೆ ಅನೇಕ ಉದಾಹರಣೆ ಕೊಟ್ಟಿದ್ದೇವೆ. ಆದರೆ ಸಿದ್ದರಾಮಯ್ಯ ಸತ್ಯ ಮಾತನಾಡಿದರೆ, ನಾವು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಅವರು ಸತ್ಯ ಹೇಳಲು ತಯಾರಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.