ಉತ್ತಮ ಆರೋಗ್ಯ, ಮಾನಸಿಕ ಚುರುಕು ಮತ್ತು ತೂಕ ನಿರ್ವಹಣೆಗೆ ಬೆಳಿಗ್ಗೆ ಬೇಗನೆ ಏಳುವುದು ತುಂಬಾ ಉಪಕಾರಿ. ಕೆಲವೊಮ್ಮೆ ನಿದ್ರೆಯಿಂದ ಎಚ್ಚರವಾಗುವುದು ಕಷ್ಟವಾದರೂ, ಸರಿಯಾದ ನಿಯಮ ಮತ್ತು ಚಟುವಟಿಕೆಗಳ ಮೂಲಕ ಈ ಅಭ್ಯಾಸವನ್ನು ಬೆಳೆಸಬಹುದು. ಬೆಳಿಗ್ಗೆ ಬೇಗ ಎಚ್ಚರಗೊಳ್ಳಲು ನೀವು ಅನುಸರಿಸಬಹುದಾದ ನಾಲ್ಕು ಪರಿಣಾಮಕಾರಿ ವಿಧಾನಗಳನ್ನು ಇಲ್ಲಿವೆ.
ರಾತ್ರಿ 9 ಗಂಟೆಗೆ ಮಲಗುವ ಅಭ್ಯಾಸ ಬೆಳೆಸಿ
ಬೆಳಿಗ್ಗೆ ಬೇಗನೆ ಎದ್ದೇಳಬೇಕು ಅಂದ್ರೆ, ರಾತ್ರಿ ಸಾಕಷ್ಟು ನಿದ್ರೆ ಬೇಕು. ದಿನದ ಎಲ್ಲಾ ಕೆಲಸಗಳನ್ನು ಸಂಜೆ ವೇಳೆಗೆ ಮುಗಿಸಿ, ರಾತ್ರಿ 9 ಗಂಟೆಗೆ ಹಾಸಿಗೆಯಲ್ಲಿರಲು ಪ್ರಯತ್ನಿಸಿ. ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಇತ್ಯಾದಿಯಿಂದ ದೂರವಿದ್ದು ಮನಸ್ಸನ್ನು ವಿಶ್ರಾಂತಿಗೊಳಿಸಿ. ಆರಂಭದಲ್ಲಿ ಕಷ್ಟವಾದರೂ, ಕೆಲ ದಿನಗಳಲ್ಲಿ ನಿದ್ರೆ ಚಕ್ರ ಸರಿಯಾದಾಗ ತಾನಾಗಿಯೇ ಬೆಳಿಗ್ಗೆ ಎಚ್ಚರವಾಗುವುದಕ್ಕೆ ಸಾಧ್ಯ.
ಶಕ್ತಿಯಾದ ಪ್ರೇರಣೆಯನ್ನು ಹೊಂದಿರಿ
ನೀವು ಬೆಳಿಗ್ಗೆ ಏಳುತ್ತಿದ್ದೀರಾ ಎಂಬುದಕ್ಕಿಂತ ಏಕೆ ಏಳಬೇಕು ಎಂಬುದೇ ಮುಖ್ಯ. ಹೊಸ ಹವ್ಯಾಸ ಕಲಿಯಲು, ವ್ಯಾಯಾಮ ಮಾಡಲು ಅಥವಾ ಧ್ಯಾನದಲ್ಲಿ ತೊಡಗಿಕೊಳ್ಳಲು ನೀವು ಉತ್ಸಾಹಿಯಾಗಿದ್ದರೆ, ನಿಮ್ಮ ಮೆದುಳಿಗೆ ಬೆಳಿಗ್ಗೆ ಎಚ್ಚರವಾಗಲು ಪ್ರೇರಣೆಯಾಗುತ್ತದೆ. ಇದು ನಿಮಗೆ ನಿಯಮಿತ ಬೆಳಗಿನ ದಿನಚರಿಯನ್ನು ಬೆಳೆಸಲು ಸಹಕಾರಿಯಾಗುತ್ತದೆ.
ರಾತ್ರಿ ಲಘು ಭೋಜನ ಮಾಡಿ
ರಾತ್ರಿಯಲ್ಲಿ ಹೆಚ್ಚಾಗಿ ತಿನ್ನುವುದು ಜೀರ್ಣಕ್ರಿಯೆಗೆ ಅಡಚಣೆ ಉಂಟುಮಾಡುತ್ತದೆ. ಇದು ಉತ್ತಮ ನಿದ್ರೆಗೆ ತೊಂದರೆ ನೀಡುತ್ತದೆ. ಅದರಿಂದ ಬೆಳಿಗ್ಗೆ ಎಚ್ಚರಗೊಳ್ಳುವುದು ವಿಳಂಬವಾಗಬಹುದು. ಹೀಗಾಗಿ, ಹಸಿವಿಗೆ ತಕ್ಕಷ್ಟು ಲಘು ಆಹಾರ ಸೇವಿಸಿ. ಇದು ನಿದ್ರೆಯನ್ನು ಸುಗಮಗೊಳಿಸಿ ಬೆಳಿಗ್ಗೆ ಎಚ್ಚರವಾಗಲು ಸಹಕಾರಿಯಾಗುತ್ತದೆ.
ನಿರಂತರ ಅಭ್ಯಾಸ ಮತ್ತು ಶಿಸ್ತಿನಿಂದ ಪಾಲನೆ ಮಾಡಿ
ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲು ಕೆಲವು ದಿನಗಳು ಬೇಕಾಗಬಹುದು. ಆದರೂ ಪ್ರತಿದಿನ ನಿರಂತರವಾಗಿ ಈ ಚಟುವಟಿಕೆಗಳನ್ನು ಮಾಡಿದರೆ, ಬೆಳಿಗ್ಗೆ ಬೇಗ ಎಚ್ಚರಗೊಳ್ಳುವುದು ನಿತ್ಯದ ಭಾಗವಾಗುತ್ತದೆ. ಉತ್ತಮ ಆರೋಗ್ಯ, ತೂಕ ನಿಯಂತ್ರಣ ಹಾಗೂ ಶಾರೀರಿಕ-ಮಾನಸಿಕ ಚುರುಕಿಗಾಗಿ ಈ ಚಿಕ್ಕ ಚಟುವಟಿಕೆಯೇ ಉತ್ತಮ ಆರಂಭ.