ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ತಿದ್ದುಪಡಿ ಕಾಯ್ದೆ-2025 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಧ್ಯಂತರ ಆದೇಶ ನೀಡುವ ಕುರಿತು ತನ್ನ ತೀರ್ಪನ್ನು ಗುರುವಾರ (ಮೇ 22) ಕಾಯ್ದಿರಿಸಿತು.
ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ವಕ್ಫ್ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟು ಮಾಡಿ ವಿಚಾರಣೆ ನಡೆಸುತ್ತಿದೆ.
ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅರ್ಜಿದಾರರ ಪರವಾಗಿ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಅವರ ವಾದಗಳನ್ನು ಮೂರು ದಿನಗಳಿಂದ ನಡೆದ ವಿಚಾರಣೆಯಲ್ಲಿ ಆಲಿಸಿತು. ಗುರುವಾರ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ನೇತೃತ್ವದ ಪೀಠವು ಮಧ್ಯಂತರ ತೀರ್ಪನ್ನು ಕಾಯ್ದಿರಿಸಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ಮೇಲಿನ ಮೂರು ದಿನಗಳ ವಿಚಾರಣೆಯಲ್ಲಿ ಕೇಂದ್ರ ಸರ್ಕಾರವು ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿತು. ಸಂಸತ್ತು ಅಂಗೀಕರಿಸಿದ ಕಾನೂನನ್ನು ಅಮಾನತು ಮಾಡಲು ಸಾಧ್ಯವಿಲ್ಲ. ವಕ್ಫ್ ಜಾತ್ಯತೀತ ಪರಿಕಲ್ಪನೆಯಾಗಿದ್ದು, ಇಸ್ಲಾಂ ಧರ್ಮದ ಭಾಗವಲ್ಲ ಎಂದು ಕೇಂದ್ರದ ಪರ ಮೆಹ್ತಾ ಅವರು ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಿಕೊಟ್ಟರು.
ಅರ್ಜಿದಾರರ ಪರ ವಕೀಲರು, ವಕ್ಫ್ ಕಾಯ್ದೆಯನ್ನು ಕಾನೂನು ಮತ್ತು ಸಾಂವಿಧಾನಿಕ ತತ್ವಗಳಿಂದ ಸಂಪೂರ್ಣವಾಗಿ ವಿಮುಖವಾಗಿ ರೂಪಿಸಿದ ಕಾಯ್ದೆ ಇದಾಗಿದೆ ಎಂದರು.