ತಂದೆಯ ದಾರಿಯಲ್ಲಿ ಸಾಗು, ಆಗ ನಿನಗೂ ಯಶಸ್ಸು ಸಿಗಲಿದೆ : ವಿಜಯೇಂದ್ರಗೆ ಎಚ್.ಡಿ.ದೇವೇಗೌಡರ ಸಲಹೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಅವರ ನಿವಾಕ್ಕೆ ತೆರಳಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ಮಾಜಿ ಪ್ರಧಾನಮಂತ್ರಿ ದೇವೇಗೌಡರನ್ನು ಇವತ್ತು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿದ್ದೇನೆ. ಅವರ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.

ಇಷ್ಟು ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿ ಇಷ್ಟು ಚಿಕ್ಕ ವಯಸ್ಸಿಗೇ ದೊಡ್ಡ ಜವಾಬ್ದಾರಿ ಕೊಟ್ಟ ಬಗ್ಗೆ ದೇವೇಗೌಡರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ತಂದೆಯವರಾದ ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆಗೆ ಶಕ್ತಿ ತುಂಬಿದ ಮಾದರಿಯಲ್ಲಿ ನೀನು ಕೂಡ ಯಶಸ್ವಿ ಆಗುವಂತೆ ಅವರು ಹರಸಿದ್ದಾರೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ, ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು, ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಹೆಚ್ಚು ಸ್ಥಾನವನ್ನು ಗೆಲ್ಲಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದು ವಿಜಯೇಂದ್ರ ಅವರು ತಿಳಿಸಿದರು.

ದೇವೇಗೌಡರ ಭೇಟಿಯಿಂದ ತುಂಬಾ ಸಂತೋಷವಾಗಿದೆ. ರಾಜ್ಯದ ಮತ್ತು ದೇಶದ ಆಗುಹೋಗುಗಳ ಬಗ್ಗೆ ಅವರ ಚಿಂತನೆಗಳು ಪ್ರೇರಕ ಮತ್ತು ದೊಡ್ಡ ಶಕ್ತಿಯನ್ನು ಕೊಡುತ್ತದೆ ಎಂದು ವಿಶ್ಲೇಷಿಸಿದರು.

ರಾಜ್ಯದಲ್ಲಿ ಹೋರಾಟ ಎಂಬ ಮಾತು ಬಂದಾಗ ದೇವೇಗೌಡರು ಮತ್ತು ಯಡಿಯೂರಪ್ಪ ಅವರ ನೆನಪಾಗುತ್ತದೆ. ಅದನ್ನು ಕೂಡ ಅವರು ನೆನಪು ಮಾಡಿಕೊಂಡರು. ಪಕ್ಷದ ಹಿತದೃಷ್ಟಿಯಿಂದ ದೇವೇಗೌಡರ ಸಲಹೆ, ಕುಮಾರಸ್ವಾಮಿ ಅವರ ಸಲಹೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಶಾಸಕರಾದ ಕೃಷ್ಣಪ್ಪ, ಸಿ.ಕೆ.ರಾಮಮೂರ್ತಿ, ಸಂಸದ ಪ್ರಜ್ವಲ್ ರೇವಣ್ಣ ಅವರು ಈ ಸಂದರ್ಭದಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!