ಮೆದುಳಿನ ಆರೋಗ್ಯಕ್ಕಾಗಿ ನಾವು ಯಾವ ಆಹಾರ ಸೇವಿಸಬೇಕು ಎಂಬ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವ ಆಹಾರವೇ ಮೊಟ್ಟೆ. ಇತ್ತೀಚೆಗೆ ಮೆದುಳಿನ ಚುರುಕುತನ, ಸ್ಮರಣಶಕ್ತಿ ಮತ್ತು ಮನಃಸ್ಥಿತಿಗೆ ಪರಿಣಾಮ ಬೀರುವ ಆಹಾರದ ಬಗ್ಗೆ ನಡೆದ ಅಧ್ಯಯನದಲ್ಲಿ ಮೊಟ್ಟೆಯು ಮಹತ್ವಪೂರ್ಣ ಸ್ಥಾನವನ್ನು ಪಡೆದಿದೆ. ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಸೇವನೆಯಿಂದ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ಸ್ಪಷ್ಟವಾಗಿದೆ.
ಮೊಟ್ಟೆಗಳಲ್ಲಿ ಪ್ರೋಟೀನ್, ಕೋಲಿನ್, ವಿಟಮಿನ್ ಬಿ6, ಬಿ12 ಮತ್ತು ಫೋಲೇಟ್ ಎಂಬ ಪೌಷ್ಟಿಕಾಂಶಗಳು ಸಮೃದ್ಧ ಪ್ರಮಾಣದಲ್ಲಿದ್ದು, ಮೆದುಳಿನ ಕಾರ್ಯ ಚಟುವಟಿಕೆಗಳಿಗೆ ಶಕ್ತಿ ನೀಡುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿರುವ ಕೋಲಿನ್ ಮೆದುಳಿನಲ್ಲಿ ಅಸೆಟೈಲ್‌ಕೋಲೀನ್ ಆಗಿ ರೂಪಾಂತರಗೊಂಡು ಸ್ಮರಣಶಕ್ತಿ, ಕಲಿಕೆಯ ಸಾಮರ್ಥ್ಯ ಹಾಗೂ ಗಮನ ಕ್ಷಮತೆಯನ್ನು ಸುಧಾರಿಸುತ್ತದೆ. ಈ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಕಾರಿ ಎನಿಸುತ್ತದೆ.
ಬೇಯಿಸಿದ ಮೊಟ್ಟೆಯಲ್ಲಿರುವ ಎಲ್-ಟೈರೋಸಿನ್ ಎಂಬ ಅಮೈನೋ ಆಮ್ಲ ಒತ್ತಡ ಮತ್ತು ಆತಂಕ ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಇದರ ಬಳಕೆ ದಿನನಿತ್ಯದ ಒತ್ತಡ ಮತ್ತು ಮನಃಸ್ಥಿತಿಯನ್ನು ಸಮತೋಲನದಲ್ಲಿರಿಸಲು ಸಹಕಾರಿ. ಹೀಗಾಗಿ, ಹೆಚ್ಚು ಒತ್ತಡ ಎದುರಿಸುತ್ತಿರುವ ವಯಸ್ಕರು ಮತ್ತು ಉದ್ಯೋಗಸ್ಥರು ಮೊಟ್ಟೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳಿತು.
ಇದು ಮಾತ್ರವಲ್ಲ, ಮೊಟ್ಟೆಯಲ್ಲಿ ಬಿ6 ಮತ್ತು ಬಿ12 ವಿಟಮಿನ್‌ಗಳು ದೇಹದ ಬುದ್ಧಿಮಾಂದ್ಯತೆ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳು ಹೇಳುತ್ತಿವೆ. ವಿಶೇಷವಾಗಿ ವಯಸ್ಸಾದವರಲ್ಲಿ ಖಿನ್ನತೆ, ಅಲ್ಜೈಮರ್ ಹಾಗೂ ನಾಳೀಯ ಬುದ್ಧಿಮಾಂದ್ಯತೆ ರೋಗಗಳ ಶಂಕೆಯನ್ನು ಕಡಿಮೆ ಮಾಡುತ್ತದೆ.
ಅನೇಕರಲ್ಲಿ ಮೊಟ್ಟೆಯು ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಎಂಬ ತಪ್ಪುಗ್ರಹಿಕೆ ಇದೆ. ಆದರೆ ತಜ್ಞರ ಪ್ರಕಾರ, ಕೊಲೆಸ್ಟ್ರಾಲ್ ಕೂಡ ಮೆದುಳಿಗೆ ಬೇಕಾದ ಮೂಲಭೂತ ಘಟಕವಾಗಿದೆ. ಸರಿಯಾದ ಪ್ರಮಾಣದಲ್ಲಿ ಮೊಟ್ಟೆ ಸೇವಿಸಿದರೆ ಯಾವುದೇ ಹಾನಿಯಿಲ್ಲ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.
ದಿನಕ್ಕೆ 1 ಅಥವಾ ಹೆಚ್ಚುತಲ್ಲಿ 2 ಮೊಟ್ಟೆಗಳನ್ನು ಸೇವಿಸಿದರೆ ಸಾಕು. ಆದರೆ ವಾರಕ್ಕೆ 2–3 ಬಾರಿ ಮೊಟ್ಟೆ ತಿನ್ನುವುದನ್ನು ರೂಢಿಸಿಕೊಂಡರೆ, ಅದು ಮೆದುಳಿನ ಆರೋಗ್ಯಕ್ಕೆ ದೀರ್ಘಕಾಲಿಕ ಲಾಭವನ್ನು ನೀಡಬಲ್ಲದು. ಮೊಟ್ಟೆ – ಮೆದುಳಿಗೆ ಬಲ, ಮನಸ್ಸಿಗೆ ಶಾಂತಿ, ಮಕ್ಕಳಿಗೆ ವಿದ್ಯೆಯಲ್ಲಿ ಹೆಚ್ಚು ಫೋಕಸ್ – ಎಲ್ಲರಿಗೂ ಬೇಕಾದ ನೈಸರ್ಗಿಕ ಪೋಷಕಾಂಶ ಎಂದರೂ ತಪ್ಪಾಗಲಾರದು!