Sunday, December 21, 2025

ತೂಕ ಇಳಿಸಬೇಕೇ? ನೆನಪಿನ ಶಕ್ತಿ ಹೆಚ್ಚಬೇಕೇ? ಇಂದೇ ನಿಮ್ಮ ಆಹಾರದಲ್ಲಿ ಬೀಟ್ರೂಟ್ ಎಲೆ ಬಳಸಿ!

ಸಾಮಾನ್ಯವಾಗಿ ನಾವು ಮಾರುಕಟ್ಟೆಯಿಂದ ಬೀಟ್ರೂಟ್ ತಂದಾಗ ಅದರ ಗೆಡ್ಡೆಯನ್ನು ಅಡುಗೆಗೆ ಬಳಸಿ ಎಲೆಗಳನ್ನು ಕಸಕ್ಕೆ ಎಸೆಯುತ್ತೇವೆ. ಆದರೆ, ನೀವು ಎಸೆಯುವ ಆ ಎಲೆಗಳು ಪೋಷಕಾಂಶಗಳ ಭಂಡಾರ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಬೀಟ್ರೂಟ್‌ನಷ್ಟೇ ಅದರ ಎಲೆಗಳೂ ಕೂಡ ಆರೋಗ್ಯಕ್ಕೆ ಹತ್ತಾರು ರೀತಿಯಲ್ಲಿ ಸಹಕಾರಿ.

ಏನೆಲ್ಲಾ ಪೋಷಕಾಂಶಗಳಿವೆ? ಬೀಟ್ರೂಟ್ ಎಲೆಗಳಲ್ಲಿ ವಿಟಮಿನ್ ಎ, ಸಿ, ಬಿ6 ಹಾಗೂ ಕಬ್ಬಿಣದ ಅಂಶ ಸಮೃದ್ಧವಾಗಿದೆ. ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತದೆ.

ಬೀಟ್ರೂಟ್ ಎಲೆಗಳ ಆರೋಗ್ಯಕರ ಪ್ರಯೋಜನಗಳು:

ಹೃದಯ ಮತ್ತು ರಕ್ತದೊತ್ತಡ: ಇದರಲ್ಲಿರುವ ನೈಟ್ರೇಟ್‌ಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಮತ್ತು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ.

ಜೀರ್ಣಕ್ರಿಯೆ ಮತ್ತು ತೂಕ ಇಳಿಕೆ: ಈ ಎಲೆಗಳಲ್ಲಿ ನಾರಿನಂಶ ಹೇರಳವಾಗಿದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರವಾಗಿದೆ.

ಗರ್ಭಿಣಿಯರಿಗೆ ಮತ್ತು ಮಕ್ಕಳ ಬೆಳವಣಿಗೆಗೆ: ಇದರಲ್ಲಿರುವ ಫೋಲೇಟ್ ಅಂಶವು ಭ್ರೂಣದ ಬೆಳವಣಿಗೆಗೆ ಮತ್ತು ಮಕ್ಕಳ ದೈಹಿಕ ವಿಕಾಸಕ್ಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೆ, ಇದು ಫಲವತ್ತತೆಯನ್ನು ಹೆಚ್ಚಿಸಲು ಕೂಡ ಸಹಕಾರಿ.

ಬಲಿಷ್ಠ ಮೂಳೆಗಳು ಮತ್ತು ಸ್ಮರಣಶಕ್ತಿ: ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ವಿಟಮಿನ್ ಬಿ6 ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ.

ಕಣ್ಣಿನ ಆರೋಗ್ಯ: ಇದರಲ್ಲಿರುವ ವಿಟಮಿನ್ ಎ ಕಣ್ಣಿನ ದೃಷ್ಟಿಯನ್ನು ಚುರುಕಾಗಿಸಲು ಮತ್ತು ಕಣ್ಣಿನ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತದೆ.

ಇನ್ನೇಕೆ ತಡ? ಇನ್ಮುಂದೆ ಬೀಟ್ರೂಟ್ ಎಲೆಗಳನ್ನು ಎಸೆಯುವ ಬದಲು ಸಾಂಬಾರ್, ಪಲ್ಯ ಅಥವಾ ಸಲಾಡ್ ರೂಪದಲ್ಲಿ ಬಳಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

error: Content is protected !!