ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಕ್ಫ್ ಕಾಯ್ದೆ ವಿರುದ್ಧ ಮುರ್ಷಿದಾಬಾದ್ ಮತ್ತು ಇತರ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರದ ಬಳಿಕ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಎಲ್ಲಾ ಧರ್ಮದ ಜನರಿಗೆ ನನ್ನ ಪ್ರಾಮಾಣಿಕ ಮನವಿ. ದಯವಿಟ್ಟು ಶಾಂತವಾಗಿರಿ, ಸಂಯಮದಿಂದಿರಿ. ಧರ್ಮದ ಹೆಸರಿನಲ್ಲಿ ಯಾವುದೇ ಅನ್ಯಾಯದ ನಡವಳಿಕೆಯಲ್ಲಿ ತೊಡಗಬೇಡಿ. ಪ್ರತಿಯೊಬ್ಬ ಮಾನವ ಜೀವವೂ ಅಮೂಲ್ಯ. ರಾಜಕೀಯಕ್ಕಾಗಿ ಗಲಭೆಗಳನ್ನು ಪ್ರಚೋದಿಸಬೇಡಿ. ಗಲಭೆಗಳನ್ನು ಪ್ರಚೋದಿಸುವವರು ಸಮಾಜಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.
ನಾವು ಕಾನೂನನ್ನು ಜಾರಿ ಮಾಡಿಲ್ಲ ಎನ್ನುವುದು ನೆನಪಿಡಬೇಕು. ಕಾನೂನನ್ನು ಕೇಂದ್ರ ಸರ್ಕಾರ ಮಾಡಿದೆ. ಆದ್ದರಿಂದ ನೀವು ಬಯಸುವ ಉತ್ತರವನ್ನು ಕೇಂದ್ರ ಸರ್ಕಾರದಿಂದ ಪಡೆಯಬೇಕು. ಈ ವಿಷಯದ ಬಗ್ಗೆ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಾವು ಈ ಕಾನೂನನ್ನು ಬೆಂಬಲಿಸುವುದಿಲ್ಲ. ಈ ಕಾನೂನನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ. ಹೀಗಾಗಿ, ಗಲಭೆ ಯಾವುದಕ್ಕಾಗಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಜನರು ನನ್ನ ಮನವೊಲಿಕೆಗೆ ಮಣಿಯಬಾರದು ಎಂದು ಒತ್ತಾಯಿಸುತ್ತಿದ್ದಾರೆ.
ವಕ್ಫ್ ತಿದ್ದುಪಡಿ ಕಾನೂನಿನ ವಿರುದ್ಧ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣಗಳು ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದು, ಪೊಲೀಸ್ ವ್ಯಾನ್‌ಗಳು ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು, ರಸ್ತೆಗಳನ್ನು ನಿರ್ಬಂಧಿಸಲಾಯಿತು. ಘಟನೆಯಲ್ಲಿ ಕನಿಷ್ಠ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ವಾಹನ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.