ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದಲ್ಲಿ ನಡೆಯಲಿದೆ.
ಸಿಜೆಐ ಸಂಜೀವ್ ಖನ್ನಾ ಅವರು ನಿವೃತ್ತರಾಗಲು ಕೆಲವೇ ದಿನಗಳು ಬಾಕಿ ಇರುವ ಕಾರಣ ಇಂದು ಈ ಅರ್ಜಿ ವಿಚಾರಣೆಯನ್ನು ಮುಂದಿನ ಸಿಜೆಐ ಪೀಠಕ್ಕೆ ವರ್ಗಾಯಿಸಿದರು. ನ್ಯಾ. ಬಿ.ಆರ್ ಗವಾಯಿಯವರು ಮೇ 14 ರಂದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದು, ಅರ್ಜಿಗಳ ಮುಂದಿನ ವಿಚಾರಣೆ ಮೇ 15ರಂದು ನಡೆಯಲಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ತಕ್ಷಣ, ಸಿಜೆಐ ಖನ್ನಾ ಅವರು ಕೇಂದ್ರದ ಪ್ರತಿ-ಅಫಿಡವಿಟ್ ಮತ್ತು ಅರ್ಜಿದಾರರ ಮರು-ಅಫಿಡವಿಟ್‌ಗಳನ್ನು ಪರಿಶೀಲಿಸಿರುವುದಾಗಿ ಹೇಳಿದರು. ಈ ವಿಚಾರದಲ್ಲಿ ಮಧ್ಯಂತರ ತೀರ್ಪು ಕಾಯ್ದಿರಿಸಲು ಬಯಸುವುದಿಲ್ಲ. ಶೀಘ್ರ ವಿಚಾರಣೆಯ ಅಗತ್ಯವಿದೆ. ಆದ್ದರಿಂದ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಈ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ ಎಂದರು.