ವಕ್ಫ್ ತಿದ್ದುಪಡಿ ಮಸೂದೆ: 14 ತಿದ್ದುಪಡಿಗೆ ಸಂಸತ್ತಿನ ಜಂಟಿ ಸಮಿತಿ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಕ್ಫ್ ತಿದ್ದುಪಡಿ ಮಸೂದೆಗೆ ಇಂದು ಸಂಸತ್ತಿನ ಜಂಟಿ ಸಮಿತಿಯು (JPC ) ಅನುಮೋದನೆ ನೀಡಿದೆ.

ಈ ಮಸೂದೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ಮಂಡಿಸಿದ್ದರು. ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ (Jagdambika Pal) ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ, ವಕ್ಫ್‌ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ.

ವಿಪಕ್ಷ ಸಂಸದರು ಸೇರಿ ಇತರರು 44 ತಿದ್ದುಪಡಿಗಳಿಗೆ ಸೂಚಿಸಿದರು. ಈ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಜಂಟಿ ಸಂಸದೀಯ ಸಮಿತಿ ಅಂಗೀಕರಿಸಿತು. ಈ 14 ಪ್ರತಿಪಾದನೆಗಳ ಅನುಮೋದನೆಗೆ ಬುಧವಾರ (ಜ.29) ವೋಟಿಂಗ್ ನಡೆಯಲಿದೆ. ಜನವರಿ 31ಕ್ಕೆ ಅಂತಿಮ ವರದಿಯನ್ನು ಲೋಕಸಭೆಗೆ ಸಲ್ಲಿಸಲು ಜೆಪಿಸಿ ಮುಖ್ಯಸ್ಥರು ತೀರ್ಮಾನಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್, ಎನ್‌ಡಿಎ ಸದಸ್ಯರು ಮಂಡಿಸಿದ 14 ತಿದ್ದುಪಡಿಗಳನ್ನು ಸ್ವೀಕರಿಸಲಾಗಿದೆ. ವಿಪಕ್ಷದ ಸದಸ್ಯರು ಹಲವು ತಿದ್ದುಪಡಿಗಳನ್ನು ಮಂಡಿಸಿದ್ದರಾದರೂ, ಅವೆಲ್ಲವನ್ನೂ ಮತದಾನದ ಮೂಲಕ ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಮಿತಿಯು ಅಂಗೀಕರಿಸಿದ ತಿದ್ದುಪಡಿಗಳು ಕಾನೂನನ್ನು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುತ್ತದೆ. ವಕ್ಫ್‌ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡುವ ಜೆಪಿಸಿ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕ ಎಂದು ಬಣ್ಣಿಸಿರುವ ಜಗದಂಬಿಕಾ ಪಾಲ್‌, ಅಂಗೀಕರಿಸಿದ ತಿದ್ದುಪಡಿಗಳು ಉತ್ತಮ ಮಸೂದೆಯನ್ನು ರೂಪಿಸುತ್ತವೆ ಎಂದು ಬಲವಾಗಿ ನಂಬಿರುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!