ಹೊಸದಿಗಂತ ವರದಿ, ಮಂಗಳೂರು:
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಡ್ಯಾರಿನ ಷಾ ಗಾರ್ಡನ್‌ನಲ್ಲಿ ಶುಕ್ರವಾರ ಪ್ರತಿಭಟನೆ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾನೂನು ಬಾಹಿರ ಪ್ರತಿಭಟನೆ, ಸಂಚಾರಕ್ಕೆ ಅಡ್ಡಿ, ತುರ್ತು ಸೇವೆಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೃಷ್ಣಾಪುರ ನಿವಾಸಿ ಜಲೀಲ್, ವಳಚ್ಚಿಲ್ ನಿವಾಸಿ ಫಜಲ್, ಮೊಹಮ್ಮದ್ ಹನೀಫ್ ನೌಫಲ್ ಆರೋಪಿಗಳು.
ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಅಧಿಕಾರಿಯ ದೂರಿನ ಆಧಾರದ ಮೇಲೆ 189(2), 126(2), 270, 324(4), 132, 285, 190 ಬಿಎನ್‌ಎಸ್ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ವಿಡಿಯೊ ದೃಶ್ಯಗಳ ವಿವರವಾದ ವಿಶ್ಲೇಷಣೆಯ ಆಧಾರದ ಮೇಲೆ ಇತರ ಆರೋಪಿಗಳನ್ನು ಗುರುತಿಸಲು ಪ್ರಯತ್ನ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರತಿಭಟನೆ ಸಂದರ್ಭ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆದರೂ ಸಂಜೆ 4:30ರ ಸುಮಾರಿಗೆ ಪ್ರತಿಭಟನಾಕಾರರ ಗುಂಪೊಂದು ಉದ್ದೇಶಪೂರ್ವಕವಾಗಿ ಹೆದ್ದಾರಿ ಮಧ್ಯೆ ಜಮಾಯಿಸಿ ವಾಹನಗಳ ಮುಕ್ತ ಸಂಚಾರವನ್ನು ನಿರ್ಬಂಧಿಸಿತು. ಪದೇ ಪದೆ ಸೂಚನೆಗಳ ಹೊರತಾಗಿಯೂ ಕೆಲವರು ಸಂಚಾರಕ್ಕೆ ಅಡ್ಡಿಪಡಿಸುವ, ತುರ್ತು ಸೇವೆಗಳಿಗೆ ಅಡ್ಡಿಪಡಿಸುವ ಮತ್ತು ಸಾರ್ವಜನಿಕ ನೌಕರರ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡುವ ಕ್ರಮಗಳಲ್ಲಿ ತೊಡಗಿದ್ದರು. ನೇರ ವೀಕ್ಷಣೆ ಮತ್ತು ಆರಂಭಿಕ ವಿಡಿಯೊ ವಿಶ್ಲೇಷಣೆಯ ಆಧಾರದ ಮೇಲೆ ಪ್ರಸ್ತುತ ಮೂವರು ಆರೋಪಿಗಳನ್ನು ಗುರುತಿಸಿದ್ದೇವೆ. ತನಿಖೆ ಮುಂದುವರೆದಿದ್ದು, ಕಾನೂನು ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.