ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದ್ದು, ಇದರಿಂದಾಗಿ ಕಳೆದ 6 ದಿನಗಳಲ್ಲಿ 23,000ಕ್ಕೂ ಅಧಿಕ ವಿಮಾನಗಳು ರದ್ದಾಗಿದೆ.
ಇರಾನ್-ಇಸ್ರೇಲ್, ಅಮೆರಿಕ ಯುದ್ಧದ ಕಾರ್ಮೋಡದಿಂದಾಗಿ ಗಲ್ಫ್ ಹಾಗೂ ಗಲ್ಫ್‌ನಿಂದ ಬೇರೆಡೆಗೆ ಹೋಗಲು ನಿಗದಿಯಾಗಿದ್ದ 23,000ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ಇದರಿಂದ ಸುಮಾರು 4.4 ಮಿಲಿಯನ್ (44 ಲಕ್ಷ) ಸೀಟ್‌ಗಳ ಮೇಲೆ ಪರಿಣಾಮ ಬೀರಿದೆ.
ಏರ್ ಇಂಡಿಯಾ ಮಾ.5ರಿಂದು 11ರ ನಡುವೆ ದೆಹಲಿ ಮತ್ತು ಟೊರೊಂಟೊಗೆ ಹಾಗೂ ಮಾ.7ರಿಂದ 10ರವರೆಗೆ ದೆಹಲಿ ಮತ್ತು ಫ್ರಾಂಕ್‌ಫರ್ಟ್‌ಗೆ ಮೂರು ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸಲಿವೆ. ಜೊತೆಗೆ ಒಂದು ಹೆಚ್ಚುವರಿ ವಿಮಾನ ದೆಹಲಿ-ಪ್ಯಾರಿಸ್ ನಡುವೆ ಕಾರ್ಯನಿರ್ವಹಿಸಲಿದೆ. ಮಧ್ಯಪ್ರಾಚ್ಯದಿಂದ ಹೆಚ್ಚಿನ ವಿಮಾನಗಳ ಅವಶ್ಯಕತೆಯಿರುವ ಹಾಗೂ ರದ್ದಾದ ವಿಮಾನಯಾನಗಳ ಹಿನ್ನೆಲೆ ಮಾ.11ರ ಬಳಿಕ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ದುಬೈಗೆ ಮತ್ತು ದುಬೈನಿಂದ ವಿಮಾನಗಳ ಸ್ಥಗಿತವನ್ನು ಮಾರ್ಚ್ 7ರವರೆಗೆ ವಿಸ್ತರಿಸಿದೆ. ಎಮಿರೇಟ್ಸ್ ಕಳೆದ ಶನಿವಾರದಿಂದ 2,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ.
ಒಮಾನ್ ಏರ್, ಮಾ.6ರವರೆಗೆ ಅಮ್ಮನ್, ದುಬೈ, ಬಹ್ರೇನ್, ದೋಹಾ, ದಮ್ಮಾಮ್, ಕುವೈತ್, ಕೋಪನ್ ಹ್ಯಾಗನ್, ಬಾಗ್ದಾದ್ ಮತ್ತು ಖಾಸಬ್‌ಗಳಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಿದೆ.
ಲುಫ್ಥಾನ್ಸ್ ಗ್ರೂಪ್ ವಿಮಾನಯಾನ ಸಂಸ್ಥೆಗಳು ಮಾ.8ರವರೆಗೆ ಟೆಲ್ ಅವೀವ್, ಬೈರುತ್, ಅಮ್ಮನ್, ಜೋರ್ಡಾನ್, ಎರ್ಬಿಲ್, ಇರಾಕ್ ಮತ್ತು ಟೆಹ್ರಾನ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಿವೆ. ಮಾ.8ರವರೆಗೆ ಇಸ್ರೇಲ್, ಲೆಬನಾನ್, ಜೋರ್ಡಾನ್, ಇರಾಕ್, ಕತಾರ್, ಕುವೈತ್, ಬಹ್ರೇನ್, ದಮ್ಮಾಮ್ (ಸೌದಿ ಅರೇಬಿಯಾ) ಮತ್ತು ಇರಾನ್ ವಾಯುಪ್ರದೇಶದ ಮೇಲೆ ಹಾರಾಟ ನಡೆಸುವುದನ್ನು ಸ್ಥಗಿತಗೊಳಿಸಿದೆ.



