ಚಳಿಗಾಲದಲ್ಲಿ ತಣ್ಣೀರಿನ ಭಯದಿಂದಲೋ ಅಥವಾ ಸಾಮಾನ್ಯ ನಿರ್ಲಕ್ಷ್ಯದಿಂದಲೋ ಕೆಲವರು ಹಲ್ಲುಜ್ಜುವುದನ್ನು ಬಿಟ್ಟುಬಿಡುತ್ತಾರೆ. “ಒಂದು ದಿನ ಬಿಟ್ಟರೆ ಏನು ವ್ಯತ್ಯಾಸವಾಗುತ್ತದೆ?” ಎಂದು ನೀವು ಅಂದುಕೊಂಡರೆ, ಎಚ್ಚರ! ಆರೋಗ್ಯ ತಜ್ಞರು ಮತ್ತು ಇತ್ತೀಚಿನ ಅಧ್ಯಯನಗಳು ಈ ಸಣ್ಣ ಅಭ್ಯಾಸವು ನಿಮ್ಮ ಜೀವಕ್ಕೆ ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತೀವ್ರ ಎಚ್ಚರಿಕೆ ನೀಡುತ್ತವೆ. ಒಟ್ಟಾರೆ ದೇಹದ ಆರೋಗ್ಯಕ್ಕಾಗಿ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಅತ್ಯಗತ್ಯ.
24 ಗಂಟೆಗಳಲ್ಲಿ ನಿಮ್ಮ ಬಾಯಲ್ಲಿ ಏನೆಲ್ಲಾ ಆಗುತ್ತದೆ?
ತಜ್ಞರು ಹೇಳುವ ಪ್ರಕಾರ, ನಾವು ಆಹಾರ ಸೇವಿಸಿದ ಕೇವಲ 20 ನಿಮಿಷಗಳಲ್ಲಿ, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ಕರೆ ಮತ್ತು ಪಿಷ್ಟವನ್ನು ಪ್ರಬಲ ಆಮ್ಲವಾಗಿ ಪರಿವರ್ತಿಸುತ್ತವೆ. ಈ ಆಮ್ಲವು ಹಲ್ಲಿನ ಹೊರ ಪದರವಾದ ಎನಾಮೆಲ್ ಅನ್ನು ಹಾನಿಗೊಳಿಸಲು ಪ್ರಾರಂಭಿಸುತ್ತದೆ.
4 – 6 ಗಂಟೆಗಳಲ್ಲಿ: ಆಹಾರ ಸೇವಿಸಿದ ನಂತರ, ಹಲ್ಲುಗಳ ಮೇಲೆ ಪ್ಲೇಕ್ ಎಂಬ ಜಿಗುಟಾದ ಪದರವು ರೂಪುಗೊಳ್ಳಲು ಪ್ರಾರಂಭಿಸುತ್ತದೆ.
24 ಗಂಟೆಗಳ ನಂತರ: ಒಸಡುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದು ರಕ್ತಸ್ರಾವ ಮತ್ತು ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು.
ಏಮ್ಸ್‌ನ ದಂತವೈದ್ಯರ ಪ್ರಕಾರ, ನೀವು ಒಂದು ದಿನ ಹಲ್ಲುಜ್ಜುವುದನ್ನು ಬಿಟ್ಟುಬಿಟ್ಟರೆ, ನಿಮ್ಮ ಬಾಯಿಯಲ್ಲಿ ಬರೋಬ್ಬರಿ ಒಂದು ಮಿಲಿಯನ್‌ಗೂ ಹೆಚ್ಚು ಬ್ಯಾಕ್ಟೀರಿಯಾಗಳು ಬೆಳೆಯಬಹುದು.
ಹಲ್ಲುಜ್ಜದಿದ್ದರೆ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳು
ಬಾಯಿಯ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದ ಕೇವಲ ಹಲ್ಲುಗಳು ಹಾಳಾಗುವುದು ಮಾತ್ರವಲ್ಲ, ಇಡೀ ದೇಹದ ಮೇಲೆ ದುಷ್ಪರಿಣಾಮ ಬೀರಬಹುದು:
ಹೃದ್ರೋಗದ ಅಪಾಯ: ನೀವು ಒಂದು ವರ್ಷ ಕಾಲ ಸರಿಯಾಗಿ ಹಲ್ಲುಜ್ಜುವುದನ್ನು ನಿರ್ಲಕ್ಷಿಸಿದರೆ, ನಿಮ್ಮ ಹೃದ್ರೋಗದ ಅಪಾಯವು ಮೂರು ಪಟ್ಟು ಹೆಚ್ಚಾಗುತ್ತದೆ! ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ರಕ್ತಪ್ರವಾಹಕ್ಕೆ ಪ್ರವೇಶಿಸಿ ಅಪಧಮನಿಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ, ಇದು ಹೃದಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಉಸಿರಾಟದ ಸೋಂಕುಗಳು: ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಶ್ವಾಸಕೋಶವನ್ನು ತಲುಪಿ ಉಸಿರಾಟದ ಸೋಂಕುಗಳು ಮತ್ತು ನ್ಯುಮೋನಿಯಾವನ್ನು ಸಹ ಉಂಟುಮಾಡಬಹುದು.
ಬಾಯಿಯ ಕ್ಯಾನ್ಸರ್: ತಂಬಾಕು ಬಳಸದಿದ್ದರೂ ಸಹ, ಹಲ್ಲುಜ್ಜದವರಿಗೆ ಬಾಯಿಯ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆ.
ಹಲ್ಲು ಕೊಳೆಯುವುದು ಮತ್ತು ನಷ್ಟ: ಒಂದು ವರ್ಷದವರೆಗೆ ಹಲ್ಲುಜ್ಜದಿದ್ದರೆ, ಹಲ್ಲುಗಳು ಸಂಪೂರ್ಣವಾಗಿ ಕೊಳೆಯಬಹುದು, ಹಲ್ಲುಕುಳಿ, ಹುಳು, ತೀವ್ರ ಒಸಡು ನೋವು ಉಂಟಾಗಿ, ಕೊನೆಗೆ ಹಲ್ಲುಗಳು ಸಡಿಲಗೊಂಡು ಬಿದ್ದುಹೋಗಬಹುದು.
ನೆನಪಿಡಿ: ದಿನಕ್ಕೆರಡು ಬಾರಿ ಬ್ರಷ್ ಮಾಡುವುದು ಕೇವಲ ಸೌಂದರ್ಯದ ಪ್ರಶ್ನೆಯಲ್ಲ, ಇದು ನಿಮ್ಮ ಇಡೀ ದೇಹದ ಆರೋಗ್ಯ ಮತ್ತು ಆಯಸ್ಸು ನಿರ್ಧರಿಸುವ ಒಂದು ಪ್ರಮುಖ ಅಭ್ಯಾಸ. ಹಲ್ಲುಜ್ಜುವ ಅಭ್ಯಾಸವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.

