ಹೊಸದಿಗಂತ ವರದಿ ಉಳ್ಳಾಲ:
ಒಂದು ವಾರದೊಳಗೆ ಮೊಗವೀರಪಟ್ಣ–ಕೋಟೆಪುರ ಸಂಪರ್ಕ ರಸ್ತೆಗೆ ಶಾಶ್ವತ ಕಾಮಗಾರಿ ಕೈಗೊಳ್ಳದಿದ್ದರೆ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ ಅಮೀನ್ ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಬಂದ್ ಮಾಡಿದರೆ ಸ್ಥಳೀಯರಿಗೆ ಯಾವುದೇ ನಷ್ಟವಾಗುವುದಿಲ್ಲ. ಆದರೆ ದಿನದ 24 ಗಂಟೆಯೂ ಈ ರಸ್ತೆಯಲ್ಲಿ ವಾಹನಗಳನ್ನು ಓಡಿಸಿ ಸಾವಿರಾರು ಕೋಟಿ ರೂ. ಲಾಭ ಗಳಿಸುವವರಿಗೆ ಭಾರೀ ನಷ್ಟ ಉಂಟಾಗಲಿದೆ ಎಂದು ಹೇಳುವ ಮೂಲಕ ಅವರು ಉಳ್ಳಾಲದ ಫಿಶ್ ಮೀಲ್ ಫ್ಯಾಕ್ಟರಿ ಮಾಲೀಕರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಸಂಪೂರ್ಣವಾಗಿ ಹದಗೆಟ್ಟಿರುವ ಉಳ್ಳಾಲ ಮೊಗವೀರಪಟ್ಣ–ಕೋಟೆಪುರ ಸಂಪರ್ಕದ ಮುಖ್ಯ ರಸ್ತೆಗೆ ಪೂರ್ಣ ಪ್ರಮಾಣದ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿ, ಉಳ್ಳಾಲ ಮೊಗವೀರಪಟ್ಣ–ಕೋಟೆಪುರ ನಾಗರಿಕ ಹೋರಾಟ ಸಮಿತಿ ವತಿಯಿಂದ ಮೊಗವೀರಪಟ್ಣದಲ್ಲಿ ಶನಿವಾರ ಬೆಳಿಗ್ಗೆ ನಡೆದ ರಸ್ತೆ ತಡೆ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಸ್ತೆ ಕಾಮಗಾರಿಗೆ 6 ಕೋಟಿ ರೂ. ಅನುದಾನ ಮಂಜೂರಾಗಿರುವುದು ಕೇವಲ ಕಡತಕ್ಕೆ ಸೀಮಿತವಾಗಿದೆಯೇ? ಕಾಮಗಾರಿ ನಡೆಯಲಿಕ್ಕಿಲ್ಲವೇ ಎಂದು ಶಾಸಕ ಖಾದರ್ ಅವರನ್ನು ಯಶವಂತ ಅಮೀನ್ ಪ್ರಶ್ನಿಸಿದರು.
ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ರಾಜೇಶ್ ಪುತ್ರನ್ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಫಿಶ್ ಮೀಲ್ ಫ್ಯಾಕ್ಟರಿಗಳನ್ನು ನಿರ್ಮಿಸಲು ಅವಕಾಶ ನೀಡಿದ್ದು ಅಂದು ಮಾಡಿದ ಪ್ರಮಾದವಾಗಿದೆ. ಆಗ ನಮ್ಮಲ್ಲಿ ಸರಿಯಾದ ಒಗ್ಗಟ್ಟು ಇರದ ಕಾರಣ ಇಂದು ಅದರ ಪರಿಣಾಮಗಳನ್ನು ನಾವೇ ಅನುಭವಿಸುವಂತಾಗಿದೆ ಎಂದು ಹೇಳಿದರು.

ಫ್ಯಾಕ್ಟರಿಗಳು ಕಾರ್ಯಾಚರಿಸುವ ಪ್ರದೇಶದ ನದಿ ತೀರಕ್ಕೆ ಮಣ್ಣು ಹಾಕಿ ಅತಿಕ್ರಮಣ ನಡೆಸಲಾಗುತ್ತಿದೆ. ಆದರೆ ಇಡೀ ಉಳ್ಳಾಲದಲ್ಲಿ ಒಂದು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಶಾಸಕ ಖಾದರ್ ಅವರಿಗೆ ಜಾಗ ಸಿಗದೇ ಇರುವುದು ವಿಪರ್ಯಾಸ ಎಂದರು. ಫ್ಯಾಕ್ಟರಿಗಳ ನೂರಾರು ಘನ ವಾಹನಗಳು ಸಂಚರಿಸುವ ರಸ್ತೆಗೆ ಡಾಂಬರೀಕರಣ ಮಾಡುವುದು ವ್ಯರ್ಥವಾಗಿದ್ದು, ಇಲ್ಲಿನ ರಸ್ತೆಗೆ ಕಾಂಕ್ರಿಟೀಕರಣ ನಡೆಸಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ಪ್ರಸನ್ನ ರವಿ ಮಾತನಾಡಿ, ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಸ್ಥಳೀಯರಿಗೆ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಕಾಡುತ್ತಿವೆ ಎಂದು ಆರೋಪಿಸಿದರು. ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ ವೇಳೆ ಪ್ರತಿಭಟನೆ ನಡೆಸಬೇಕಿತ್ತು ಎಂದರು. ಸಚಿವ ಸಂಪುಟ ಸಭೆಗಾಗಿ ಮಂಗಳೂರು ನಗರದ ಡಿವೈಡರ್‌ಗಳಲ್ಲಿ ರಾತ್ರೋರಾತ್ರಿ ದೊಡ್ಡ ದೊಡ್ಡ ಮರಗಳನ್ನು ನೆಟ್ಟು ಮುಖ್ಯಮಂತ್ರಿಗಳನ್ನೇ ಯಾಮಾರಿಸಿರುವ ಖಾದರ್ ಅವರು ಆರೋಗ್ಯ ಸಚಿವರಲ್ಲ, ಕೃಷಿ ಸಚಿವರಾಗಬೇಕಿತ್ತು ಎಂದು ವ್ಯಂಗ್ಯವಾಡಿದರು.
‘ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಸ್ಥಳೀಯರಿಗೆ ಕ್ಯಾನ್ಸರ್ ಉಡುಗೊರೆ’
ಸ್ಥಳೀಯ ನಿವಾಸಿ ಗಣೇಶ್ ಉಳ್ಳಾಲ್ ಮಾತನಾಡಿ, ಉಳ್ಳಾಲದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಸಿಎಸ್ಆರ್ ಅನುದಾನ ಕೂಡ ವಿನಿಯೋಗವಾಗುತ್ತಿಲ್ಲ. ಬದಲಾಗಿ ಪರಿಸರದ ಜನರಿಗೆ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಇಡೀ ಉಳ್ಳಾಲಕ್ಕೆ ವಿದ್ಯುತ್ ಇಲ್ಲದಿದ್ದರೂ ಇಂತಹ ಫ್ಯಾಕ್ಟರಿಗಳಿಗೆ ಮಾತ್ರ ಮೆಸ್ಕಾಂ ಇಲಾಖೆಯು ಪ್ರತ್ಯೇಕ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿ 24 ಗಂಟೆ ವಿದ್ಯುತ್ ಪೂರೈಸುತ್ತಿದೆ ಎಂದು ಆರೋಪಿಸಿದರು.

ಫಿಶ್ ಮೀಲ್ ಮಾಫಿಯಾಗಳಿಗೆ ಹೆದರಿ ಈಗಾಗಲೇ ಅನೇಕ ಸ್ಥಳೀಯ ನಿವಾಸಿಗಳು ಜಾಗ ಮಾರಿ ಊರನ್ನೇ ತೊರೆದಿದ್ದಾರೆ. ಇಲ್ಲಿನ ಮಾಲಿನ್ಯದಿಂದಾಗಿ ಯುವತಿಯರಿಗೆ ನೆಂಟಸ್ಥಿಕೆಯೂ ಕೂಡಿ ಬರದ ಸ್ಥಿತಿ ಎದುರಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಯಾರೆಲ್ಲ ಭಾಗವಹಿಸಿದ್ದಾರೆ ಎಂಬುದನ್ನು ಕೋಟಿಕುಳ ಮಾಫಿಯಾಗಳು ಗಮನಿಸಿ, ಅವರನ್ನು ದಮನಿಸುವ ಪ್ರಯತ್ನ ನಡೆಸಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಉಳ್ಳಾಲ ಶಾರದೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ್ ಅರಸುಹಿತ್ಲು, ಹಿರಿಯರಾದ ಬಾಬು ಬಂಗೇರ, ಹೋರಾಟ ಸಮಿತಿಯ ಪ್ರಮುಖರಾದ ರಂಜಿತಾ ಉಳ್ಳಾಲ, ಮಂಗಳೂರು ರಿಯಾಝ್, ಇರ್ಫಾನ್ ಕೋಟೆಪುರ, ಶರ್ಮಿಳಾ ಬಂಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು.



