ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಹೊಸ ಸಿನಿಮಾ ವಾರಣಾಸಿ ಬಿಡುಗಡೆಯ ಸಿದ್ಧತೆಗಳು ವೇಗ ಪಡೆದುಕೊಂಡಿದ್ದರೂ, ಪ್ರಚಾರ ಕಾರ್ಯಕ್ರಮದ ಮಧ್ಯೆಯೇ ಅವರ ಹೇಳಿಕೆ ಈಗ ವಿವಾದಕ್ಕೆ ತುತ್ತಾಗಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಟೈಟಲ್ ಲಾಂಚ್ ಈವೆಂಟ್ ವೇಳೆ ತಾಂತ್ರಿಕ ದೋಷದ ಕಾರಣಕ್ಕೆ ಟೀಸರ್ ಪ್ರದರ್ಶನಕ್ಕೆ ವಿಳಂಬವಾಗುತ್ತಿದ್ದಂತೆ, ರಾಜಮೌಳಿ ಮಾಡಿದ್ದ ಕಾಮೆಂಟ್‌ಗಳು ಹಿಂದು ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಲಾಗಿದೆ. ‘ಹನುಮಂತ ಒಳ್ಳೇದು ಮಾಡ್ತಾನೆ ಎಂದು ತಂದೆ ಹೇಳಿದ್ರು; ಆದ್ರೆ ಹೀಗೇನಾ ಒಳ್ಳೇದು ಮಾಡೋದು?’ ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ.
ಈ ಹೇಳಿಕೆಗೆ ಕೋಪಗೊಂಡ ರಾಷ್ಟ್ರೀಯ ವಾನರ ಸೇನಾ ಸಂಘಟನೆ ಹೈದರಾಬಾದ್‌ನ ಸರೂರ್‌ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ರಾಜಮೌಳಿಯ ಮಾತು ಹಿಂದು ದೇವತೆಗಳ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದೆ.
ಸಿನಿಮಾ ಕ್ಷೇತ್ರದಲ್ಲಿ ಧಾರ್ಮಿಕ ಸಂಕೇತಗಳನ್ನು ಅಗೌರವಿಸುವ ಘಟನೆಗಳು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ, ರಾಜಮೌಳಿ ವಿರುದ್ಧ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ. ಸರೂರ್‌ನಗರ ಪೊಲೀಸರು ದೂರು ಸ್ವೀಕರಿಸಿದ್ದು, ಮುಂದಿನ ಕ್ರಮಗಳ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವ ನಿರೀಕ್ಷೆಯಿದೆ.

