Monday, January 12, 2026

ರಜ-ಮಜ ಎಲ್ಲ ಮುಗೀತು, ಇನ್ನು ಶಾಲೆಗೆ ಸರಿಯಾಗಿ ಹೋಗು ಎಂದಿದ್ದೇ ತಪ್ಪಾಗಿ ಹೋಯ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸರಿಯಾಗಿ ಶಾಲೆಗೆ ಹೋಗು, ಮನೆಗೆ ಬಂದು ಅಭ್ಯಾಸ ಮಾಡು, ದೊಡ್ಡವನಾಗಿ ಒಳ್ಳೆ ನೌಕರಿ ಗಿಟ್ಟಿಸಿಕೋ ಎಂದು ಎಲ್ಲ ಪೋಷಕರೂ ಹೇಳುತ್ತಾರೆ. ಆದರೆ ಇಷ್ಟು ಸಣ್ಣ ಮಾತಿಗೆ ಮಕ್ಕಳು ಆತ್ಮಹತ್ಯೆ ದಾರಿ ಹಿಡಿದರೆ?

ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಹೋಬಳಿಯಲ್ಲಿ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ಓದುವಂತೆ ಹೇಳಿದ್ದಕ್ಕೆ ಮನನೊಂದಿದ್ದ ಎಂದು ಹೇಳಲಾಗಿದೆ.

ಮೃತ ಬಾಲಕನನ್ನು ಚೆನ್ನಕಾಟಯ್ಯನ ಗುಡ್ಲು ನಿವಾಸಿ ಜಗದೀಶ್ (14) ಎಂದು ಗುರುತಿಸಲಾಗಿದೆ. ಈತ ಕೆಂಕೆರೆ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಕಳೆದ ಕೆಲವು ದಿನಗಳಿಂದ ಜಗದೀಶ್ ತನ್ನ ತಾಯಿಯ ತವರ ಮನೆಗೆ ರಜೆಯ ಮೇಲೆ ಹೋಗಿದ್ದನು. ಶನಿವಾರವಷ್ಟೇ ಊರಿಗೆ ವಾಪಸ್ಸಾಗಿದ್ದ ಈತನಿಗೆ ತಂದೆ ರಮೇಶ್ ಅವರು, ‘ಇನ್ನು ಮುಂದೆ ಶಾಲೆ ತಪ್ಪಿಸಬೇಡ, ಪ್ರತಿದಿನ ಶಾಲೆಗೆ ಹೋಗು’ ಎಂದು ಬುದ್ಧಿವಾದ ಹೇಳಿ ಶಾಲೆಗೆ ಕಳುಹಿಸಿದ್ದರು.

ತಂದೆಯ ಮಾತಿನಂತೆ ಅಂದು ಶಾಲೆಗೆ ತೆರಳಿದ್ದ ಜಗದೀಶ್, ಶಾಲೆಯ ಅವಧಿ ಮುಗಿದ ಬಳಿಕ ತನ್ನ ಗೆಳೆಯನೊಂದಿಗೆ ಮನೆಗೆ ಹಿಂತಿರುಗುತ್ತಿದ್ದನು. ಗೊಲ್ಲರಹಟ್ಟಿ ಸಮೀಪದ ಬಾವಿಯ ಬಳಿ ಬಂದಾಗ, ಜಗದೀಶ್ ತನ್ನ ಗೆಳೆಯನಿಗೆ ‘ನೀನು ಮುಂದೆ ಹೋಗು, ನಾನು ಬರುತ್ತೇನೆ’ ಎಂದು ಹೇಳಿ ಆತನನ್ನು ಕಳುಹಿಸಿದ್ದಾನೆ. ಗೆಳೆಯ ಕಣ್ಣ ಮರೆಯಾಗುತ್ತಿದ್ದಂತೆ ತನ್ನ ಚಪ್ಪಲಿ ಮತ್ತು ಶಾಲಾ ಬ್ಯಾಗ್‌ ಅನ್ನು ಬಾವಿಯ ಪಕ್ಕದಲ್ಲೇ ಇಟ್ಟು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಶನಿವಾರ ಮಧ್ಯಾಹ್ನ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದು, ಬಾವಿಯ ಪಕ್ಕದಲ್ಲಿ ಬ್ಯಾಗ್ ಮತ್ತು ಚಪ್ಪಲಿ ಕಂಡುಬಂದಾಗ ವಿಷಯ ತಿಳಿದು ಆತಂಕಗೊಂಡಿದ್ದಾರೆ.

ಮಗನ ಸಾವಿನ ಸುದ್ದಿ ತಿಳಿದು ಪೋಷಕರ ಹೃದಯ ಒಡೆದುಹೋಗಿದೆ.

ಮಕ್ಕಳೇ ನಿಮ್ಮ ತಂದೆ-ತಾಯಿ ಏನೇ ಹೇಳಿದರೂ ನಿಮ್ಮ ಒಳ್ಳೆಯದಕ್ಕೆ ಹೇಳುತ್ತಾರೆ. ಜಗತ್ತಿನಲ್ಲಿ ನಮ್ಮವರೇ ಅಲ್ಲದ ಸಾವಿರಾರು ಜನ ಮನಸ್ಸನ್ನು ನೋಯಿಸಿ ಹೋಗುತ್ತಾರೆ. ಅವರಿಗೆ ಏನೂ ಮಾಡೋಕಾಗದ ನಾವು, ಪ್ರೀತಿಯಿಂದ ಹೇಳುವ ಪೋಷಕರ ವಿರುದ್ಧ ನಿಲ್ಲೋದೇಕೆ? ಆತ್ಮಹತ್ಯೆ ಯಾವುದಕ್ಕೂ ದಾರಿಯಲ್ಲ. ಸಮಸ್ಯೆಗಳಿದ್ದರೆ ಪೋಷಕರ ಜತೆ ಮಾತನಾಡಿ, ಬಗೆಹರಿಸಿ, ಜೀವನವನ್ನು ಜೀವಿಸಿ..

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!