ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಜಿಟಲ್ ಯುಗದಲ್ಲಿ ಯೂಟ್ಯೂಬ್ ನೋಡಿ ಅಡುಗೆ, ರಿಪೇರಿ ಕೆಲಸಗಳು ನಡೆಯುತ್ತಿರುವುದು ಸಾಮಾನ್ಯ. ಆದರೆ ಯೂಟ್ಯೂಬ್ ವಿಡಿಯೋ ಆಧರಿಸಿ ಶಸ್ತ್ರಚಿಕಿತ್ಸೆ ನಡೆಸಿದ ಆಘಾತಕಾರಿ ಘಟನೆ ಬಿಹಾರದ ಭಾಗಲ್ಪುರದಲ್ಲಿ ಬೆಳಕಿಗೆ ಬಂದಿದೆ. ನಕಲಿ ವೈದ್ಯನ ನಿರ್ಲಕ್ಷ್ಯ ಮತ್ತು ಅಜ್ಞಾನದಿಂದ ಗರ್ಭಿಣಿಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಮಗು ಮಾತ್ರ ಅದೃಷ್ಟವಶಾತ್ ಬದುಕುಳಿದಿದೆ.
ಮೃತ ಮಹಿಳೆಯನ್ನು ಸ್ವಾತಿ ದೇವಿ ಎಂದು ಗುರುತಿಸಲಾಗಿದೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ರಸೂಲ್ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಇದ್ದ ನಕಲಿ ವೈದ್ಯ, ಅಗತ್ಯ ವೈದ್ಯಕೀಯ ಸೌಲಭ್ಯಗಳಿಲ್ಲದೇ, ಯೂಟ್ಯೂಬ್‌ನಲ್ಲಿ ಸಿಸೇರಿಯನ್ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆಪರೇಷನ್ ವೇಳೆ ತೀವ್ರ ರಕ್ತಸ್ರಾವವಾಗಿ ಮಹಿಳೆಯ ಸ್ಥಿತಿ ಗಂಭೀರಗೊಂಡಿತು. ನಂತರ ಉತ್ತಮ ಚಿಕಿತ್ಸೆಗಾಗಿ ಭಾಗಲ್ಪುರಕ್ಕೆ ಕರೆದೊಯ್ಯಲು ಹೇಳಿ ಆಸ್ಪತ್ರೆ ಮುಚ್ಚಿ ವೈದ್ಯರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: FOOD | ಆರೋಗ್ಯಕರ ಗೋಧಿ ಕಿಚಡಿ ತಿಂದಿದ್ದೀರಾ? ಇಲ್ಲಾಂದ್ರೆ ಒಮ್ಮೆ ಈ ರೆಸಿಪಿ ಟ್ರೈ ಮಾಡಿ
ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಸ್ಪತ್ರೆ ಎದುರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಅಕ್ರಮ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

