ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಖದಲೆಗಳ ಸಮಸ್ಯೆಯಿಂದ ಈಗಾಗಲೇ ತತ್ತರಿಸಿರುವ ಯುರೋಪ್ ಗೆ ಈಗ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾನವ-ಪ್ರೇರಿತ ಹವಾಮಾನ ಬದಲಾವಣೆ ಮತ್ತು ನೀರಿನ ಅತಿಯಾದ ಬಳಕೆಯಿಂದ ದಕ್ಷಿಣ ಯುರೋಪಿಯನ್ನರು ಹೆಚ್ಚು ತೀವ್ರವಾದ ಶಾಖದ ಅಲೆಗಳು ಮತ್ತು ದೀರ್ಘ ಬರಗಾಲದ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು ಜಲಕ್ಷಾಮದ ಕರಿನೆರಳು ಆವರಿಸಿಕೊಂಡಿದೆ.
ಪೋರ್ಚುಗಲ್ನಿಂದ ಇಟಲಿಯವರೆಗಿನ ಸರ್ಕಾರಗಳು ನೀರಿನ ಬಳಕೆಯನ್ನು ಕನಿಷ್ಠಕ್ಕೆ ಮಿತಿಗೊಳಿಸಲು ನಾಗರಿಕರಿಗೆ ಕರೆ ನೀಡುತ್ತಿವೆ. ನೆದರ್ಲ್ಯಾಂಡ್ ದೇಶವು ನೀರಿನ ಕೊರತೆಯನ್ನು ಘೋಷಿಸಿದೆ. ಅಲ್ಲದೇ ಮಳೆಯ ಕೊರತೆಯಿಂದ ಬರಗಾಲ ಎದುರಾಗಿದೆ ಎಂದಿದೆ. ಫ್ರಾನ್ಸ್ ನಲ್ಲಿಯೂ ಕೂಡ ನೀರಿನ ಕೊರತೆ ಎದುರಾಗಿದ್ದು ನದಿಗಳು ಬರಿದಾಗುತ್ತಿವೆ. ಆದ್ದರಿಂದ ನದಿ ನೀರು ಅತಿಯಾಗಿ ಬಿಸಿಯಾಗುವುದನ್ನು ತಡೆಯಲು ಅಣುವಿದ್ಯತ್ ಉತ್ಪಾದನೆಯನ್ನು ಕಡಿತಗೊಳಿಸಲಾಗಿದೆ. ಏತನ್ಮಧ್ಯೆ, ಯುರೋಪಿನ ರೈನ್ ನದಿ ಬತ್ತುತ್ತಿರುವುದರಿಂದ ಪ್ರಮುಖ ಹಡಗು ಮಾರ್ಗವೂ ಕೂಡ ಮುಚ್ಚುವ ಭೀತಿ ಎದರುರಾಗಿದೆ. ಯುರೋಪ್ನಲ್ಲಿನ ವಸಂತ ಕಾಲದ ನಂತರದ ಬರವು ನೀರಿನ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಿದೆ. 11 ಯುರೋಪಿಯನ್ ಪ್ರದೇಶಗಳಲ್ಲಿ ಮಳೆಯ ಕೊರತೆಯು ಹೊರಹೊಮ್ಮುತ್ತಿದೆ ಎಂದು ವರದಿಗಳು ಹೇಳಿವೆ.
ನೆದರ್ಲ್ಯಾಂಡ್ಸ್ ಬುಧವಾರದಂದು ಅಧಿಕೃತ ನೀರಿನ ಕೊರತೆಯನ್ನು ಘೋಷಿಸಿದೆ. ಬರಗಾಲದ ನಡುವೆ ನೀರನ್ನು ಸಂರಕ್ಷಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಚ್ ಸರ್ಕಾರ ಹೇಳಿದೆ ಮತ್ತು ಅಧಿಕಾರಿಗಳು ಈಗಾಗಲೇ ಕೃಷಿ ಮತ್ತು ಸಾಗಣೆ ಮೇಲೆ ಮಿತಿಗಳನ್ನು ವಿಧಿಸಿದೆ. ನದಿಗಳ ನೀರಿನ ಮಟ್ಟವೂ ಕಡಿಮೆಯಾಗಿರುವುದರಿಂದ ಸಮುದ್ರದ ಉಪ್ಪುನೀರು ನದಿಗಳಿಗೆ ನುಗ್ಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.