ಹೊಸದಿಗಂತ ವರದಿ, ಮಂಡ್ಯ:
ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗದಿದ್ದರೂ, ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿರುವುದರಿಂದ ಸಿಡಬ್ಲ್ಯೂಸಿ ಶಿಫಾರಸ್ಸಿನಂತೆ ಕೆ.ಆರ್.ಎಸ್.ನಿಂದ ನೀರು ಹರಿಸುವುದನ್ನು ತಪ್ಪಿಸಿಕೊಂಡಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಜು.31ರವರೆಗೆ ಪ್ರತಿದಿನ ಒಂದು ಟಿಎಂಸಿ ನೀರು ನೀಡುವಂತೆ ಸೂಚನೆ ನೀಡಿದೆ. ಆದರೆ ಪ್ರಸ್ತುತ ಮಳೆ ಸಮರ್ಪಕವಾಗಿಲ್ಲ. ಜುಲೈ ಕೊನೆ ಹಾಗೂ ಆಗಸ್ಟ್‌ನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇದೀಗ 104 ಅಡಿ ಇದೆ. ಇಲ್ಲಿನ ಜನ-ಜಾನುವಾರು, ಕೆರೆಕಟ್ಟೆಗಳಿಗೆ ನೀರು ತುಂಬಿಸುವುದಕ್ಕೂ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಆಗಸ್ಟ್‌ನಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಲಿದೆ. ಆದರೆ ಪ್ರಸ್ತುತ ನೀರಿನ ಕೊರತೆ ಇದೆ. ಇನ್ನಷ್ಟು ದಿನ ಕಾದು ನೋಡಿ ಬೆಳೆ ಹಾಕುವ ಬಗ್ಗೆ ನಿರ್ಧಾರ ಮಾಡಲು ತೀರ್ಮಾನಿಸಲಾಗಿದೆ. ಆದರೆ ಸಿಡಬ್ಲ್ಯೂಆರ್‌ಸಿ ಶಿಫಾರಸು ಶಾಕ್ ನೀಡಿದೆ. ಹಿಂದೆ ನಮ್ಮ ಅಧಿಕಾರಿಗಳು ಸಮಿತಿ ಮುಂದೆ ಸಮರ್ಥವಾಗಿ ವಾದ ಮಂಡಿಸಿತ್ತು. ಆಗ ನೀರು ಬಿಟ್ಟಿರಲಿಲ್ಲ. ಈ ಬಾರಿ ತಮಿಳುನಾಡು-ಕರ್ನಾಟಕ ಅಧಿಕಾರಿಗಳ ನಡುವೆ ಚರ್ಚೆ ನಡೆಸಿದ್ದಾರೆ. ನಮ್ಮ ಅಧಿಕಾರಿಗಳು ಸಮರ್ಥವಾಗಿ ಮಂಡಿಸಿದ್ದಾರೆ. ಆದರೆ ಅಂತಿಮವಾಗಿ ಸಮಿತಿ ತೀರ್ಮಾನ ತೆಗೆದುಕೊಂಡು ನೀರು ಹರಿಸುವಂತೆ ಸೂಚಿಸಿದೆ ಎಂದರು.