ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ: ಇನ್ಮುಂದೆ ಸ್ವಿಮ್ಮಿಂಗ್‌ ಪೂಲ್ ಗಳಿಗೆ ಕಾವೇರಿ ನೀರು ಬಳಸುವಂತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಈ ಹಿನ್ನೆಲೆ ಇನ್ಮುಂದೆ ಜಲಮಂಡಳಿಯಿಂದ ಪೂರೈಕೆ ಮಾಡುವ ಕುಡಿಯುವ ನೀರನ್ನು ಈಜುಕೊಳಗಳಿಗೆ (ಸ್ವಿಮ್ಮಿಂಗ್‌ ಪೂಲ್) ಬಳಕೆ ಮಾಡದಂತೆ ನಿಷೇಧಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್‌ಎಸ್‌ಬಿ) ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ಈ ವರ್ಷ ಮಳೆಯ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಹೀಗಾಗಿ, ಜನರು ಕಾವೇರಿ ನದಿಯಿಂದ ಪೂರೈಕೆ ಮಾಡುವ ಕುಡಿಯುವ ನೀರನ್ನು ಅನ್ಯ ಉದ್ದೇಶವಾದ ಸ್ವಿಮ್ಮಿಂಗ್‌ ಪೂಲ್‌ಗೆ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ‘ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈಜು ಕೊಳ ಉದ್ದೇಶಗಳಿಗೆ ಬಳಸುವುದನ್ನು ನೀಷೇದಿಸಲಾಗಿದೆ.

ಬೆಂಗಳೂರಿನಲ್ಲಿ ವಾಸವಿರುವ ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ. ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಮನೆ ಮುಂದಿನ ಕೈದೋಟಗಳು, ಕಾರು ಮತ್ತು ಇತರೆ ವಾಹನಗಳ ಸ್ವಚ್ಛಗೊಳಿಸಲು, ಕಟ್ಟಡ ನಿರ್ಮಾಣ ಸೇರಿ ಇತರೆ ಕಾರ್ಯಗಳಿಗೆ ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದೆ. ಈಗ ಸ್ವಿಮ್ಮಿಂಗ್ ಪೂಲ್‌ಗೂ ಕುಡಿಯುವ ನೀರನ್ನು ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದೆ.

ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಹಾಗೂ ಉಲ್ಲಂಘನೆ ಮಾಡುವವರ ವಿರುದ್ಧ ಜಲಮಂಡಳಿಯ ಕಾಯ್ದೆ 1964ರ ಕಲಂ 109ರಂತೆ 5,000ರೂ.ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ 5 ಸಾವಿರ ರೂ. ಜೊತೆಗೆ ಹೆಚ್ಚುವರಿಯಾಗಿ ಪ್ರತಿ ದಿನಕ್ಕೆ ತಲಾ 500 ರೂ. ಹೆಚ್ಚುವರಿಯಾಗಿ ದಂಡ ಹಾಕಲಾಗುವುದು. ಹಾಗೆಯೇ, ಈಜುಕೊಳದ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇನ್ನು ಸಾರ್ವಜನಿಕರು ಮೇಲ್ಕಂಡ ನಿಷೇಧಗಳನ್ನು ಯಾರಾದರು ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಬೆಂಗಳೂರು ಜಲಮಂಡಳಿಯ ಕಾಲ್ ಸೆಂಟರ್ ಸಂಖ್ಯೆ 1916ಗೆ ತಿಳಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!