ನೀರಿನ ಅಭಾವ: ಹಾರಂಗಿ ಜಲಾಶಯದಿಂದ 400 ಕ್ಯುಸೆಕ್ ನೀರು ಬಿಡುಗಡೆ

ಹೊಸದಿಗಂತ, ಕುಶಾಲನಗರ:

ಉತ್ತರ ಕೊಡಗಿನ ಐದು ಗ್ರಾಮ ಪಂಚಾಯತ್’ಗಳ 15 ಉಪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ 400 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

ಬಿರು ಬಿಸಿಲಿನ ಕಾರಣದಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದ್ದು, ಹೆಬ್ಬಾಲೆ, ಶಿರಂಗಾಲ ಸೇರಿದಂತೆ ಐದು ಗ್ರಾಮ ಪಂಚಾಯತಿ ವ್ಯಾಪ್ತಿಯ 15 ಉಪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಹೆಬ್ಬಾಲೆಯಲ್ಲಿರುವ ಗ್ರಾಮೀಣ ಕುಡಿಯುವ ನೀರಿನ ಘಟಕಕ್ಕೆ ಕಾವೇರಿ ನದಿಯಿಂದ ನೀರು ದೊರಕದ ಹಿನ್ನೆಲೆಯಲ್ಲಿ ಇದೀಗ ಹಾರಂಗಿಯಿಂದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಇದರಿಂದ ಕೊಡಗು‌ ಮತ್ತು ಹಾಸನ ಜಿಲ್ಲೆಯ ಕಾವೇರಿ ನದಿ ದಂಡೆಯ ಗ್ರಾಮಗಳ ದನಕರುಗಳಿಗೆ ಮತ್ತು ಕುಡಿಯುವ ನೀರಿನ ಸರಬರಾಜಿಗೆ ಅನುಕೂಲವಾಗಲಿದೆ.

ಅಣೆಕಟ್ಟೆಯಿಂದ ದಿನ 100 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿತ್ತು. ಆದರೆ ಇದೀಗ ಕಾವೇರಿ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ಜಲಚರಗಳಿಗೂ ನೀರು ಇಲ್ಲದಂತಾಗುವ ಪರಿಸ್ಥಿತಿ ಕಂಡುಬರುತ್ತಿದೆ.ಈ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯಲ್ಲಿ ಸಂಗ್ರಹವಿರುವ 2 ಟಿ.ಎಂ.ಸಿ ನೀರಿನ ಪೈಕಿ 400 ಕ್ಯುಸೆಕ್ ನೀರನ್ನು ಅಣೆಕಟ್ಟೆಯ ಕೆಳಭಾಗದಲ್ಲಿ ನದಿ ದಂಡೆಯಲ್ಲಿರುವ ಗ್ರಾಮಗಳ ಜನ-ಜಾನುವಾರುಗಳಿಗೆ ಕುಡಿಯುವುದಕ್ಕಾಗಿ ನೀರನ್ನು ಹರಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!