September 19, 2026
Saturday, September 19, 2026
spot_img

ಚಿತ್ರದುರ್ಗಕ್ಕೆ ಭದ್ರ ನೀರು ಹರಿಯುವುದು ಖಂಡಿತ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯ ಜನತೆಗೆ ಜೀವನಾಡಿ ಆಗಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಶೀಘ್ರವೇ ಮುಗಿಸಿ ಕಾಲುವೆಯ ಮುಖಾಂತರ ನೀರನ್ನು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.

ಕುಂಚಿಗನಾಳ್ ಗ್ರಾಮದ ಬಳಿಯ ಹಳೆ ರಾಷ್ಟ್ರೀಯ ಹೆದ್ದಾರಿ-4ರ ಬಳಿ ಹಾದು ಹೋಗಿರುವ ಭದ್ರಾ ಮೇಲ್ದಂಡೆಯ ಕಾಲುವೆಯ ಕಾಮಗಾರಿಯನ್ನು ಜಂಟಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಬಹುದಿನಗಳ ಕನಸಾಗಿರುವಂತಹ ಭದ್ರಾ ಮೇಲ್ದಂಡೆ ಯೋಜನೆ ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಂಡು ರೈತರಿಗೆ ಅನುಕೂಲವಾಗಲಿದೆ, ಇದರ ಅನ್ವಯವಾಗಿ ಭದ್ರಾ ಮೇಲ್ದಾಂಡೆ ಯೋಜನೆಯ ಅಧಿಕಾರಿಗಳು ಜೊತೆ ಸಮಾಲೋಚನೆಯನ್ನು ನಡೆಸಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ನಡೆಸಬೇಕು ಶೀಘ್ರವೇ ಭದ್ರಾ ನೀರನ ಕೆರೆಗಳಿಗೆ ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ ಜಿಲ್ಲೆಯ ರೈತಾಪಿ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಗಲಿದೆ ಈಗಾಗಲೇ 47,000 ಎಕರೆ ಪ್ರದೇಶಕ್ಕೆ ಡ್ರಿಪ್ಪಿಂಗ್ ವ್ಯವಸ್ಥೆಯನ್ನು ಈ ಯೋಜನೆಯ ಮೂಲಕ ಕಲ್ಪಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 19 ಕೆರೆಗಳಿಗೆ ಈಗಾಗಲೇ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಇದರ ಜೊತೆಗೆ ಇನ್ನೂ 8 ಕೆರೆಗಳನ್ನ ಭದ್ರಾ ಮೇಲ್ದಂಡೆ ಯೋಜನೆಗೆ ಸೇರ್ಪಡೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮತ್ತು ಉಪ ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರದ ಮುಖೇನ ತಿಳಿಸಲಾಗಿತ್ತು ಎಂದು ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ, ಕಾಟೀಹಳ್ಳಿ, ಸಿದ್ದಾಪುರ, ಮಾನಂಗಿ, ಹುಲ್ಲೂರು, ತಿಮ್ಮಣ್ಣನಾಯಕನ ಕೆರೆ, ನಂದೀಪುರ ಹಾಗೂ ಅನ್ನೇಹಾಳ್ ಗ್ರಾಮಗಳ ಕೆರೆಗಳಿಗೆ ಭದ್ರಾ ನೀರು ತುಂಬಿಸುವ ಕಾರ್ಯಕ್ಕೆ ಈಗಾಗಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಂದ ಅನುಮೋದನೆ ದೊರಕಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ರೈತಪಿ ವರ್ಗದವರಿಗೆ ಹಾಗೂ ಕುಡಿಯುವ ನೀರಿಗೆ ಸಾಕಷ್ಟು ಅನುಕೂಲ ದೊರೆಯಲಿದೆ, ಯೋಜನೆಯ ಮಹತ್ವವಾದ ಕಾರ್ಯ ಅತೀ ಶೀಘ್ರದಲ್ಲಿ ಮುಕ್ತಾಯಗೊಂಡು ರೈತಪಿ ವರ್ಗದವರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:

ಚಿತ್ರದುರ್ಗ ನಗರದ ಹೊರ ವಲಯದ ಹಾದು ಹೋಗಿರುವಂತಹ ಭದ್ರಾ ಮೇಲ್ದಂಡೆಯ ಯೋಜನೆಯ ಕಾಮಗಾರಿಯನ್ನ ಗುಣಮಟ್ಟದಿಂದ ಮಾಡಬೇಕು, ಮಾಡುವ ಕೆಲಸ ಪ್ರಾಮಾಣಿಕವಾಗಿ ಮಾಡಿದರೆ ನಿಮ್ಮ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ನೀವು ಮಾಡುವ ಕಾರ್ಯದಿಂದ ಸಾವಿರಾರು ರೈತರ ಕುಟುಂಬಗಳಿಗೆ ಅನುಕೂಲವಾಗಲಿದೆ, ರೈತರಿಗೆ ಅನುಕೂಲವಾಗುವಂತಹ ಕಾರ್ಯಗಳಲ್ಲಿ ಯಾವುದೆ ಲೋಪದೋಷಗಳು ಕಂಡುಬರುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ದೊಡ್ಡಸಿದ್ದವ್ವನಹಳ್ಳಿ, ಮದಕರಿಪುರ, ಗೋನೂರು, ದಂಡಿನ ಕುರುಬರಹಟ್ಟಿ, ಬೊಮ್ಮನಹಳ್ಳಿ, ಸಾಸಲಹಟ್ಟಿ, ಮುತ್ತಯನಹಟ್ಟಿ, ಕಲೇನಹಳ್ಳಿ, ಬಚ್ಚಬೋರನಹಟ್ಟಿ, ಹಂಪಯ್ಯನಮಾಳಿಗೆ, ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿ ಗ್ರಾಮಗಳ ಬಳಿ ಹಾದು ಹೋಗಿರುವಂತ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ಹರೀಶ್, ಸಹಾಯ ಕಾರ್ಯಪಾಲಕರಾದ ಇಂಜಿನಿಯರ್ ಕಿರಣ್ ಕುಮಾರ್, ಶ್ರೀಧರ್ ನಾಯಕ್, ಗಂಗೇಶ್, ಹರೀಶ್, ಸುನಿಲ್ ಕುಮಾರ್, ಜೀವಿತ, ತೋಟಗಾರಿಕೆ ಸಹಾಯಕ ನಿರ್ದೇಶಕ ದೇವರಾಜ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಕಾಂಗ್ರೆಸ್ ಮುಖಂಡ ರಾಜೇಶ್ ಮಧುರೆ, ಪಪ್ಪಿಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ ಚಿನ್ನು ಹಾಗೂ ಇಲಾಖೆ ಅಧಿಕಾರಿಗಳು ಮತ್ತು ರೈತರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !