ವಯನಾಡು ಬೈ ಎಲೆಕ್ಷನ್ ಲಾಭಕ್ಕೆ ಮಣಿದ ಡಿಕೆಶಿ: ಬಂಡಿಪುರ ನೈಟ್‌ ಟ್ರಾವೆಲ್‌ ಬ್ಯಾನ್‌ ವಾಪಾಸ್‌?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಲಿ ಸೇರಿ ಇತರ ವನ್ಯಜೀವಿಗಳ ರಕ್ಷಣೆ ಹಾಗೂ ಮಾನವ ವನ್ಯ ಜೀವಿ ಸಂಘರ್ಷ ಉದ್ದೇಶದಿಂದ ರಾಜ್ಯ ಸರ್ಕಾರ 2009 ರಿಂದ ಬಂಡೀಪುರದಲ್ಲಿ ಊಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಕೇರಳದ ಸುಲ್ತಾನ್‌ ಬತ್ತೇರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 766ನಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧ ವಿಧಿಸಿತ್ತು.

ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ವಾಹನಗಳ ಸಂಚಾರ ನಿಷೇಧ ವಿಧಿಸಿತ್ತು. ಕೇರಳದಿಂದ ದೊಡ್ಡ ಮಟ್ಟದ ವಿರೋಧ ವ್ಯಕ್ತವಾದರೂ ಕರ್ನಾಟಕ ಮಾತ್ರ ತನ್ನ ನಿರ್ಧಾರಕ್ಕೆ ಅಚಲವಾಗಿ ಉಳಿದಿತ್ತು.

ಆದ್ರೆ ಇದೀಗ ಕೋಝಿಕ್ಕೋಡ್-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿ 766 ರ ರಾತ್ರಿ ಸಂಚಾರ ನಿಷೇಧವನ್ನು ಪರಿಹರಿಸಲು ಕರ್ನಾಟಕ ಸರ್ಕಾರ ತನ್ನ ಶಕ್ತಿಯಿಂದ ಎಲ್ಲವನ್ನೂ ಮಾಡಲಿದೆ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಹೌದು, ವಯನಾಡು ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಜಿಲ್ಲೆಯ ಪಡಿಂಜರೆತಾರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ವಾದ್ರಾ ಅವರು ಎರಡು ದಿನಗಳ ಹಿಂದೆ ತಮ್ಮನ್ನು ಕರೆದಿದ್ದರು. ರಾಷ್ಟ್ರೀಯ ಹೆದ್ದಾರಿ 766 ನಲ್ಲಿ ರಾತ್ರಿ ಸಂಚಾರ ನಿಷೇಧ ಹೇರಿರುವ ಬಗ್ಗೆ ಚರ್ಚೆ ಮಾಡಲು ಕರ್ನಾಟಕಕ್ಕೆ ಬರುವುದಾಗಿ ಹೇಳಿದ್ದರು ಎಂದಿದ್ದಾರೆ.

ರಾತ್ರಿ ಪ್ರಯಾಣದ ನಿರ್ಬಂಧವನ್ನು ತೆಗೆದುಹಾಕಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಈ ನಿಷೇಧದಿಂದಾಗಿ ಕರ್ನಾಟಕದಲ್ಲಿ ಓದುತ್ತಿರುವ ಕೇರಳದ ಸಾವಿರಾರು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

ಬಂಡಿಪುರದಲ್ಲಿ ಹಾದುಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ರಾತ್ರಿ ಸಂಚಾರ ನಿರ್ಭಂಧವಿದೆ. ಈ ನಿರ್ಧಾರ ಫಲಪ‍್ರದವಾಗಿದ್ದು, ದೊಡ್ಡ ಪ್ರಾಣಿಗಳು ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಆದ್ರೆ ಈಗ ಕೇರಳ ಸರ್ಕಾರ ಹಾಗೂ ಗಾಂಧಿ ಕುಟುಂಬದ ಲಾಬಿಯಿಂದಾಗಿ ಈ ನಿಷೇಧವನ್ನು ಹಿಂಪಡೆಯುವ ಬಗ್ಗೆ ಕೇರಳದಲ್ಲಿ ಡಿಕೆ ಶಿವಕುಮಾರ್‌ ಮಾತನಾಡಿದ್ದಾರೆ. ಡಿಕೆಶಿ ಹೇಳಿಕೆಯನ್ನು ಖಂಡಿರುವ ಮೈಸೂರು -ಕೊಡಗು ಸಂಸದ ಯದುವೀರ್‌, ಇಂಥ ಬೇಜವಾಬ್ದಾರಿ ಹೇಳಿಕೆ ನೀಡಬೇಡಿ ಎಂದಿದ್ದಾರೆ. ‘ವಯನಾಡ್ ಉಪಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ನಮ್ಮ ರಾಜ್ಯದ ನೈಸರ್ಗಿಕ ಸಂಪತ್ತಾದ ಬಂಡಿಪುರ ಅಭಯಾರಣ್ಯದ ಮಧ್ಯೆ ಹಾದು ಹೋಗುವ ಎನ್‌ಎಚ್ 766 ರ ರಾತ್ರಿ ಪ್ರಯಾಣ ನಿಷೇಧವನ್ನು ತೆಗೆದುಹಾಕುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇತ್ತೀಚೆಗೆ ಕೇರಳದಲ್ಲಿ ನೀಡಿರುವ ಹೇಳಿಕೆಯು ಬೇಜವಾಬ್ದಾರಿ ಮತ್ತು ಖಂಡನೀಯವಾಗಿದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

https://x.com/yaduveerwadiyar/status/1855599536292401524?ref_src=twsrc%5Egoogle%7Ctwcamp%5Eserp%7Ctwgr%5Etweet

ಬಂಡೀಪುರದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ವೈವಿಧ್ಯತೆಯು ಅದರೊಳಗೆ ಅಭಿವೃದ್ಧಿ ಹೊಂದುತ್ತಿರುವ ವಿವಿಧ ಪ್ರಭೇದಗಳ ವನ್ಯಜೀವಿಗಳಿಗೆ ಸೇರಿದ ಸಂಪತ್ತು. ಈ ಅಭಯಾರಣ್ಯದ ಮೂಲಕ ರಾತ್ರಿ ಪ್ರಯಾಣಕ್ಕೆ ಅವಕಾಶ ನೀಡುವುದರಿಂದ ವನ್ಯಜೀವಿಗಳಿಗೆ ಅಪಾಯವಿದೆ ಮತ್ತು ಮಾನವ-ವನ್ಯಜೀವಿ ಸಂಘರ್ಷಕ್ಕೆ ಇದು ಎಡೆ ಮಾಡಿಕೊಡುತ್ತದೆ. ಬೇರೆ ರಾಜ್ಯದಲ್ಲಿನ ಚುನಾವಣಾ ಲಾಭಕ್ಕಾಗಿ ಕರ್ನಾಟಕದ ವನ್ಯಜೀವಿಗಳಿಗೆ ಧಕ್ಕೆ ತರುವುದು ಸಮಂಜಸವಲ್ಲ. ನಮ್ಮ ಸರ್ಕಾರವು ಈ ಪರಿಸರ ವಲಯಗಳ ರಕ್ಷಣೆಯ ನಿಟ್ಟಿನಲ್ಲಿ ಯಾವುದೆ ರಾಜಿ ಮಾಡಿಕೊಳ್ಳದೆ ರಕ್ಷಿಸಬೇಕಾಗಿದೆ’ ಎಂದು ಯದುವೀರ್‌ ಒಡೆಯರ್‌ ಟ್ವೀಟ್‌ ಮಾಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!