ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವು 358 ಜನರನ್ನು ಬಲಿಪಡೆದಿದೆ. ಇನ್ನೂ 300 ಜನ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮ (LIC) ಸೇರಿ ಹಲವು ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ “ಮೃತರು ಹಾಗೂ ಗಾಯಾಳುಗಳು ವಿಮೆ ಮಾಡಿಸಿದ್ದರೆ, ಅವರ ಕ್ಲೇಮ್ಅನ್ನು ಶೀಘ್ರದಲ್ಲೇ ನೀಡುವ ಮೂಲಕ ನೆರವಾಗಿ” ಎಂದು ಸೂಚಿಸಿದೆ.
ದೇಶದ ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳಾದ ಎಲ್ಐಸಿ, ನ್ಯೂ ಇಂಡಿಯಾ ಇನ್ಶುರೆನ್ಸ್, ಓರಿಯಂಟಲ್ ಇನ್ಶುರೆನ್ಸ್ ಹಾಗೂ ಯುನೈಟೆಡ್ ಇಂಡಿಯಾ ಕಂಪನಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯವು ಸೂಚನೆ ನೀಡಿದೆ. ಸಂತ್ರಸ್ತ ಕುಟುಂಬಗಳಿಗೆ ಎಷ್ಟು ಸಾಧ್ಯವೋ ಅಷ್ಟು ನೆರವಾಗಿ ಎಂದು ಸೂಚಿಸಿದೆ.
ಈಗಾಗಲೇ ವಿಮಾ ಕಂಪನಿಗಳು ಸ್ಥಳೀಯ ಪತ್ರಿಕೆಗಳು, ಸಾಮಾಜಿಕ ಜಾಲತಾಣ, ಕಂಪನಿ ವೆಬ್ಸೈಟ್ ಹಾಗೂ ಎಸ್ಎಂಎಸ್ ಮೂಲಕ ಪಾಲಿಸಿ ಹೋಲ್ಡರ್ಗಳನ್ನು ಸಂಪರ್ಕಿಸಲು ಯತ್ನಿಸುತ್ತಿವೆ ಎಂದು ಕೂಡ ಕೇಂದ್ರ ಸರ್ಕಾರ ತಿಳಿಸಿದೆ.
ವಯನಾಡು, ಪಾಲಕ್ಕಾಡ್, ಕಲ್ಲಿಕೋಟೆ, ಮಲಪ್ಪುರಂ ಹಾಗೂ ತ್ರಶ್ಶೂರ್ನಲ್ಲಿರುವ ಪಾಲಿಸಿದಾರರನ್ನು ಸಂಪರ್ಕಿಸುವ, ಅವರ ಸಂಪರ್ಕ ಸಂಖ್ಯೆಯನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಾಗುತ್ತದೆ. ಆ ಮೂಲಕ ವಿಮಾ ಸೌಲಭ್ಯದ ಮೂಲಕವಾದರೂ ಸಂತ್ರಸ್ತರಿಗೆ ನೆರವಾಗಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.