ವಯನಾಡು ಭೂಕುಸಿತ ದುರಂತ: ಅನಾಥವಾಗಿವೆ 30ಕ್ಕೂ ಹೆಚ್ಚು ಮೃತದೇಹಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇರಳದ ವಯನಾಡು ಭೂಕುಸಿತ ದುರಂತ ಸಂಭವಿಸಿ ದಿನಗಳೇ ಕಳೆದಿದ್ದರೂ ಗಂಟೆಗಂಟೆಗೂ ಮಣ್ಣಿನಡಿ ಮೃತದೇಹಗಳು ಕಾಣಿಸುತ್ತಿವೆ.

ಶವಾಗಾರಗಳ ಮುಂದೆ ಜನರು ಜಮಾಯಿಸಿದ್ದು, ಆಂಬುಲೆನ್ಸ್‌ಗಳಲ್ಲಿ ತಮ್ಮವರ ಮೃತದೇಹ ಬಾರದೇ ಇರಲಿ ಎಂದು ಪ್ರಾರ್ಥನೆ ನಡೆಸುತ್ತಿದ್ದಾರೆ. ಹಲವು ಮೃತದೇಹಗಳು ಅನಾಥವಾಗಿದ್ದು, ಅಂತ್ಯಸಂಸ್ಕಾರಕ್ಕಾಗಿ ಕುಟುಂಬದವರಿಗೆ ಕಾಯಲಾಗುತ್ತಿದೆ.

ಮೇಪಾಡಿಯ ಪುತ್ತುಮಲ ಎಂಬಲ್ಲಿ ಗುರುತು ಸಿಗದ ಮೃತ ದೇಹಗಳ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ನೆರವೇರಿಸಿದೆ. ಕಳೆದ ರಾತ್ರಿ 30 ಮೃತ ದೇಹಗಳ ಪೈಕಿ 8 ಮೃತಗಳ ಸಂಸ್ಕಾರ ನಡೆಸಲಾಗಿದೆ. ಸರ್ವ ಧರ್ಮ ಸಂಪ್ರದಾಯದ ವಿಧಿವಿಧಾನದ ಮೂಲಕ ಅಂತ್ಯಕ್ರಿಯೆ ಮಾಡಲಾಯ್ತು. ಇನ್ನು ಉಳಿದ ಮೃತದೇಹಗಳ ಅಂತ್ಯಕ್ರಿಯೆಯನ್ನು ಇವತ್ತು ನೆರವೇರಲಿದೆ.

ಗುಡ್ಡ ಕುಸಿತದಿಂದ ಸರ್ವನಾಶವಾಗಿರುವ ನಾಲ್ಕು ಗ್ರಾಮಗಳಲ್ಲಿ ಕಳೆದ 6 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ವಯನಾಡು ಜನರ ಜೀವನಾಡಿ ಎನಿಸಿರುವ ಚಾಲಿಯಾರ್‌ ನದಿಯಲ್ಲಿ ಇನ್ನೂ ಮೃತದೇಹಗಳು ತೇಲಿಬರುತ್ತಿವೆ. ಸದ್ಯ ನಾಪತ್ತೆ ಆಗಿರುವವರಿಗಾಗಿ ಇವತ್ತು ಕೂಡ ಶೋಧ ಕಾರ್ಯ ನಡೆಯಲಿದೆ. 7ನೇ ದಿನದ ಶೋಧ ಕಾರ್ಯಕ್ಕೆ ರಕ್ಷಣಾ ಪಡೆಗಳು ಸಜ್ಜಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!