ಹೊಸದಿಗಂತ ಚಿತ್ರದುರ್ಗ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ “ಶಿಕ್ಷಣ-ಸಂಘಟನೆ-ಹೋರಾಟ” ಎಂಬ ಮೂರು ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸಬೇಕಾದ ಜೀವನದ ಮಂತ್ರವಾಗಿವೆ ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಲಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣದಿಂದ ಜ್ಞಾನ, ಹೋರಾಟದಿಂದ ಹಕ್ಕುಗಳು, ಸಂಘಟನೆಯಿಂದ ಶಕ್ತಿ ಪಡೆದುಕೊಳ್ಳುವ ಮಾರ್ಗದಲ್ಲಿ ನಡೆಯುವುದು ನವ ಭಾರತ ನಿರ್ಮಾಣದ ಪ್ರಥಮ ಹೆಜ್ಜೆಯಾಗಿದೆ ಎಂದರು.
ಡಾ. ಅಂಬೇಡ್ಕರ್ ಅವರು ಕೇವಲ ಸಮಾಜಸೇವಕರಲ್ಲ, ಅವರು ಭಾರತದ ಪುನರ್ ನಿರ್ಮಾಣಕ್ಕೆ ಕೊಡುಗೆ ನೀಡಿದ ಮಹಾತ್ಮ. ಶೋಷಿತರಿಗೆ ಧೈರ್ಯ, ಶಿಕ್ಷಣ, ಆತ್ಮಗೌರವ ಮತ್ತು ನ್ಯಾಯದ ಮಾರ್ಗವನ್ನು ತೋರಿದ ದಾರಿದೀಪ. ಅವರ ಜೀವನದ ಪ್ರಮುಖ ಕೊಂಡಿಯಾಗಿದ್ದು ಭಾರತದ ಸಂವಿಧಾನ. ಅವರು ಅಧ್ಯಕ್ಷರಾಗಿದ್ದ ಕರಡು ಸಮಿತಿಯ ಮಾರ್ಗದರ್ಶನದಲ್ಲಿ ರೂಪುಗೊಂಡ ನಮ್ಮ ಸಂವಿಧಾನವು ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ ಮತ್ತು ವ್ಯಕ್ತಿಗತ ಹಕ್ಕುಗಳನ್ನು ನಮ್ಮೆಲ್ಲರಿಗೂ ನೀಡುವ ಪವಿತ್ರ ಗ್ರಂಥವಾಗಿದೆ ಎಂದು ಹೇಳಿದರು.
ಕಾನೂನು ತಜ್ಞರಾಗಿ ಸಮಾಜ ಸುಧಾರಕರಾಗಿ ಅರ್ಥ ಶಾಸ್ತ್ರಜ್ಞರಾಗಿ, ಪತ್ರಕರ್ತರಾಗಿ, ತತ್ವಜ್ಞಾನಿಯಾಗಿ, ಸಾಹಿತಿಯಾಗಿ ತಮ್ಮ ಇರುವಿಕೆಯನ್ನು ತೋರ್ಪಡಿಸಿದರು. ಹಾಗಾಗಿ ಅವರ ಹೆಸರೇ ನಮಗೆಲ್ಲಾ ಸ್ಪೂರ್ತಿ, ಸಾಧನೆಗೆ ಪ್ರೇರಣೆ, ಅವರ ಬದುಕು ತತ್ವ ಆದರ್ಶಗಳು ನಮ್ಮೆಲ್ಲರ ಪಾಲಿಗೆ ಸರ್ವಕಾಲಿಕ ಮಾರ್ಗದರ್ಶಕ. ಸಮಾನತೆಯಿಂದಲೆ ಪ್ರಗತಿ ಎನ್ನುವುದು ಅವರ ಪರಮೋಚ್ಚ ನಂಬಿಕೆಯಾಗಿತ್ತು ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, 1927ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಧೃಢ ನಿರ್ಧಾರ ಕೈಗೊಂಡು ಮನಸ್ಮೃತಿ ಎನ್ನುವ ಅಲಿಖಿತ ಸಂವಿಧಾನವನ್ನು ಸುಟ್ಟು ಹಾಕಿದರು. ವಿದ್ಯಾಭ್ಯಾಸದಿಂದ ಅಂಬೇಡ್ಕರ್ ಗಳಿಸಿದ ವಿದ್ವತ್ ಇಂತಹ ಧೃಡ ನಿರ್ಧಾರ ಕೈಗೊಳ್ಳಲು ಕಾರಣವಾಯಿತು. ಬಹಳಷ್ಟು ಜನರು ಇದನ್ನು ವಿರೋಧಿಸಿದರು. ದೇಶದ ಸಂವಿಧಾನ ರಚನೆ ಮಾಡಿ, ದೇಶದಲ್ಲಿ ಜಾರಿಯಾದ ಮೇಲೂ ಅಂಬೇಡ್ಕರ್ ರಚಿಸಿದ ಸಂವಿಧಾನ ಒಪ್ಪದಂತೆ ವಿರೋಧಿಸಿ ಅಂದಿನ ಕಾಲದಲ್ಲಿ ಚಳುವಳಿಯನ್ನು ಸಹ ನಡೆಸಲಾಯಿತು. ಸಂವಿಧಾನ ರಚಿಸಿ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಹೇಳಿದರು.
ಚಳ್ಳಕೆರೆ ಕೋಟೆ ಬೋರಮ್ಮ ಪಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಸಂಜೀವ್ ಕುಮಾರ್ ಪೋತೆ ಅಂಬೇಡ್ಕರ್ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಭಾರತ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ವಿವಿಧ ಸಂಘಟನೆಗಳ ಮೂಲಕ ಸಮಾಜದ ಏಳಿಗೆಗಾಗಿ ಹೋರಾಟ ನಡೆಸಿ, ಜನಸೇವೆಗೈದ ಪರಿಶಿಷ್ಟ ಜಾತಿಯ ವಿವಿಧ ಮುಖಂಡರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಕೂಡ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್, ನಗರಸಭೆ ಪೌರಾಯುಕ್ತೆ ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮುಂತಾದವರು ಪಾಲ್ಗೊಂಡಿದ್ದರು.