ಹೊಸದಿಗಂತ ಡಿಜಿಟಲ್ ಡೆಸ್ಕ್;
ಜಗತ್ತಿನ ನಾನಾ ದೇಶಗಳು ಸಂಘರ್ಷ ಎದುರಿಸುತ್ತಿರುವ ಸಮಯದಲ್ಲಿ ಭಾರತ-ಆಸಿಯಾನ್ ಸ್ನೇಹವು ಬಹಳ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಲಾವೋಸ್ ನಲ್ಲಿ ಗುರುವಾರ ಆಯೋಜಿಸಿದ್ದ ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ 21 ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ನಮ್ಮದು ಶಾಂತಿ ಪ್ರಿಯ ರಾಷ್ಟ್ರ. ನಾವು ಎಲ್ಲ ರಾಷ್ಟ್ರಗಳ ಏಕತೆ ಮತ್ತು ಸಮಗ್ರತೆಯನ್ನು ಗೌರವಿಸುತ್ತೇವೆ. ನಮ್ಮ ಯುವಕರಿಗೆ ಉಜ್ವಲ ಭವಿಷ್ಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದರು.
10 ವರ್ಷಗಳ ಹಿಂದೆ ಆಕ್ಟ್ ಈಸ್ಟ್ ನೀತಿಯನ್ನು ಘೋಷಿಸಿದ್ದು, ಕಳೆದ ದಶಕದಲ್ಲಿ ಇದು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳಿಗೆ ಹೊಸ ಶಕ್ತಿ ನೀಡಿದೆ. ಕಳೆದ ದಶಕದಲ್ಲಿ ಭಾರತ-ಆಸಿಯಾನ್ ವ್ಯಾಪಾರವು ದ್ವಿಗುಣಗೊಂಡಿದೆ. ಈಗ 130 ಬಿಲಿಯನ್ ಅಮೆರಿಕನ್ ಡಾಲರ್ ಮೀರಿದೆ. ಏಷ್ಯಾದ ಶತಮಾನ ಎಂದೂ ಕರೆಯಲ್ಪಡುವ 21 ನೇ ಶತಮಾನವು ಭಾರತ ಮತ್ತು ಆಸಿಯಾನ್ ದೇಶಗಳ ಶತಮಾನವಾಗಿದೆ ಎಂದು ಪ್ರಧಾನಿ ಹೇಳಿದರು.
ನಳಂದ ವಿಶ್ವವಿದ್ಯಾನಿಲಯದಲ್ಲಿ 300 ಕ್ಕೂ ಹೆಚ್ಚು ಆಸಿಯಾನ್ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ಪ್ರಯೋಜನ ಪಡೆದಿದ್ದಾರೆ. ವಿಶ್ವವಿದ್ಯಾನಿಲಯಗಳ ಜಾಲವನ್ನು ಪ್ರಾರಂಭಿಸಲಾಗಿದೆ. ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ, ಮ್ಯಾನ್ಮಾರ್, ಇಂಡೋನೇಷ್ಯಾದಲ್ಲಿ ಸಾಮಾನ್ಯ ಪರಂಪರೆ ಮತ್ತು ಸಂರಕ್ಷಣೆಗಾಗಿ ಕೆಲಸ ಮಾಡಲಾಗಿದೆ ಎಂದು ವಿವರಿಸಿದರು.