ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆ ಪ್ರಧಾನಿ ಶೇಖ್ ಹಸೀನಾ ಅವರು ಢಾಕಾದಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಪ್ರಜಾಪ್ರಭುತ್ವ ಪ್ರಮುಖ ಕಾರಣ.ಬಾಂಗ್ಲಾದೇಶ ಸಾರ್ವಭೌಮ ಮತ್ತು ಸ್ವತಂತ್ರ ದೇಶ. ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ನಾವು ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಸ್ಥಾಪಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯು ಸುಗಮವಾಗಿ ಮುಂದುವರಿಯಬೇಕು ಎಂದು ನಾನು ಬಯಸುತ್ತೇವೆ ಎಂದರು.
ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಚುನಾವಣೆಯನ್ನು ಬಹಿಷ್ಕರಿಸಿದೆ. ಆ ಪಕ್ಷ ದೇಶಕ್ಕೆ ಮಾರಕ ಅದೊಂದು ಭಯೋತ್ಪಾದಕ ಸಂಘಟನೆ. ದೇಶದಲ್ಲಿ ನಿರ್ಭೀತಿಯಿಂದ ಮತದಾನ ಮಾಡುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಭಾರತದಂತಹ ನಿಷ್ಠಾವಂತ ಮಿತ್ರ ರಾಷ್ಟ್ರವನ್ನು ಹೊಂದಿರುವುದು ನಮ್ಮ ಪುಣ್ಯ. ಬಾಂಗ್ಲಾದೇಶದ ವಿಮೋಚನಾ ಹೋರಾಟದಲ್ಲಿ ನಮ್ಮ ಬೆಂಬಲಕ್ಕೆ ನಿಂತರು. 1975 ರ ನಂತರ ನಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಾಗ ನಮ್ಮ ಕುಟುಂಬಕ್ಕೆ ಆಶ್ರಯ ನೀಡಿದರು. ಭಾರತದ ಜನತೆಗೆ ನನ್ನ ಶುಭಾಶಯಗಳು ಎಂದು ಹಸೀನಾ ಹೇಳಿದರು.
ಬಾಂಗ್ಲಾದೇಶ ಸಂಸತ್‌ಗೆ ಭಾನುವಾರ ಮತದಾನ ನಡೆಯುತ್ತಿದ್ದು, ಚುನಾವಣಾ ಆಯೋಗ ಹಾಗೂ ಭದ್ರತಾ ಪಡೆಗಳು ಭಾರೀ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ. ಈ ನಡುವೆ ಮತದಾನದ ಹೊತ್ತಲ್ಲಿ ಅಲ್ಲಲ್ಲಿ ಗಲಭೆಗಳು ನಡೆದಿರುವ ಮಾಹಿತಿ ಕೇಳಿ ಬರ್ತಿದೆ.
ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿ ಇಲ್ಲದ ಕಾರಣ ಶೇಖ್ ಹಸೀನಾ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ಇದೆ.