ಹೊಸದಿಗಂತ ಯಲ್ಲಾಪುರ:
ಪಟ್ಟಣದ ಕಾಳಮ್ಮನಗರದಲ್ಲಿ ಇತ್ತೀಚೆಗೆ ಬರ್ಬರವಾಗಿ ಹತ್ಯೆಗೀಡಾದ ರಂಜಿತಾ ಬನ್ಸೋಡೆ ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸಿ. ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ರಂಜಿತಾ ಅವರ ಅಗಲಿಕೆಯಿಂದ ಕಂಗಾಲಾಗಿರುವ ಕುಟುಂಬದವರನ್ನು ಭೇಟಿಯಾದ ಅವರು, “ನಿಮ್ಮ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ” ಎಂದು ಸಾಂತ್ವನ ಹೇಳಿದರು. ಅಲ್ಲದೆ, ರಂಜಿತಾ ಅವರ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿ, ಆತನ ಭವಿಷ್ಯವನ್ನು ಉಜ್ವಲಗೊಳಿಸುವತ್ತ ಗಮನಹರಿಸಿ ಎಂದು ಕುಟುಂಬದವರಿಗೆ ತಿಳಿಸಿ, ಬೆಂಬಲದ ಭರವಸೆ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುಳಾ ಸಿ., ರಾಜ್ಯದಲ್ಲಿ ಸರಣಿಯಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಲ್ಲಾಪುರದ ರಂಜಿತಾ ಹತ್ಯೆ ಹಾಗೂ ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ನಡೆಸಿರುವ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ ಎಂದು ಖಂಡಿಸಿದರು.
“ಹುಬ್ಬಳ್ಳಿಯ ಸುಜಾತಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರಣಕ್ಕೇ ಅವರ ಮೇಲೆ ರಾಜಕೀಯ ದ್ವೇಷದಿಂದ ಇಂತಹ ಹಲ್ಲೆ ನಡೆಸಲಾಗಿದೆ. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳು ಸೌಜನ್ಯಕ್ಕಾದರೂ ತನಿಖೆಯ ಭರವಸೆ ನೀಡಿಲ್ಲ. ಬದಲಾಗಿ ಸಂತ್ರಸ್ತ ಮಹಿಳೆಯ ವಿರುದ್ಧವೇ ಮಾತನಾಡಿರುವುದು ಒಬ್ಬ ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ” ಎಂದು ಅವರು ಟೀಕಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಶಾರದಾ ನಾಯ್ಕ, ಗೀತಾ ಶಿಕಾರಿಪುರ, ದೇವಕ್ಕ ಕೆರೆಮನೆ, ರೇಖಾ ಹೆಗಡೆ, ಶ್ರುತಿ ಹೆಗಡೆ, ಚಂದ್ರಕಲಾ ಭಟ್ಟ, ಶ್ಯಾಮಿಲಿ ಪಾಟಣಕರ್, ಕಲ್ಪನಾ ನಾಯ್ಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

