ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪದಡಿ ಸಾಕ್ಷಿ ದೂರುದಾರ ಚಿನ್ನಯ್ಯನ ಬಂಧನವಾಗಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಬಿಜೆಪಿಯವರು ಏನೂ ಮಾತನಾಡದೆ ಅಡ್ಡಗೋಡೆ ಮೇಲೆ ದೀಪ ಇಡುವ ಕೆಲಸ ಮಾಡುತ್ತಿದ್ದರು. ಷಡ್ಯಂತ್ರದ ಕುರಿತು ನಾನು ಪ್ರಸ್ತಾವನೆ ಮಾಡಿದ ಮೇಲೆ ಅವರು ಮಾತನಾಡಿದ್ದಾರೆ ಎಂದರು.
ಎಸ್‌ಐಟಿ ತನಿಖೆಯನ್ನು ಧರ್ಮಸ್ಥಳದ ಕುಟುಂಬದವರೇ ಸ್ವಾಗತ ಮಾಡಿದ್ದಾರೆ. ಇಲ್ಲಿ ಯಾರ ತಪ್ಪಿದೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ, ಗೃಹ ಸಚಿವರು, ಮುಖ್ಯಮಂತ್ರಿಗಳು ಹೇಳಿದ್ದಾರೆ. ಆ ಕೆಲಸ ನಾವು ಮಾಡುತ್ತಿದ್ದೇವೆ. ನಾವು ಅವರ ಪರವೂ ಅಲ್ಲ, ಇವರ ಪರವೂ ಅಲ್ಲ ನಾವು ನ್ಯಾಯದ ಪರ. ಇಲ್ಲಿ ಧರ್ಮದ ರಾಜಕಾರಣ ಬೇಡ ಎಂದು ಅವರು ಹೇಳಿದರು.