ಸೂರ್ಯನ ಅಧ್ಯಯನಕ್ಕೆ ನಾವು ರೆಡಿ: ‘ಆದಿತ್ಯ ಎಲ್1’ ಫೋಟೋ ಹಂಚಿಕೊಂಡ ಇಸ್ರೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಯಾನ-3 ಯಶಸ್ಸಿನ ಸಂಭ್ರಮದಲ್ಲಿರುವ ಇಸ್ರೋ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡುತ್ತಿದ್ದು ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ‘ಆದಿತ್ಯ-ಎಲ್‌ 1’ ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡುವುದಕ್ಕೆ ಸಿದ್ಧತೆ ನಡೆಸಿದೆ.

ಈ ಕುರಿತು ಇಸ್ರೊ ಮಾಹಿತಿ ನೀಡಿದ್ದು, ವಾಹಕದ ತಪಾಸಣೆ ಪೂರ್ಣಗೊಂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೊಗಳನ್ನು ಹಂಚಿಕೊಂಡಿದೆ.

ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳುಹಿಸಲಿರುವ ಚೊಚ್ಚಲ ಯೋಜನೆ ಆದಿತ್ಯ-ಎಲ್‌1 ಅನ್ನು ಸೆಪ್ಟೆಂಬರ್‌ 2ರಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದಿಂದ ಉಡ್ಡಯನವಾಗಲಿದೆ ಎಂದು ಇಸ್ರೊ ತಿಳಿಸಿದೆ.

ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನ ನಡೆಸುವುದಕ್ಕೆ ಬೇಕಾದ ರೀತಿಯಲ್ಲಿ ಆದಿತ್ಯ ಎಲ್‌1 ಅನ್ನು ವಿನ್ಯಾಸಗೊಳಿಸಲಾಗಿದೆ. ಈ (ಎಲ್‌ 1) ಪ್ರದೇಶದಲ್ಲಿ ಉಪಗ್ರಹವನ್ನು ಇರಿಸಿ ಸೌರ ಮಾರುತದ ಅಧ್ಯಯನ ನಡೆಸಲಾಗುವುದು. ಎಲ್‌ ಎಂದರೆ, ಲಾಗ್ರೇಂಜ್‌ ಬಿಂದು. ಇದು ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಬಲ ಸಮಾನವಾಗಿರುವ ಪ್ರದೇಶ. ಇಲ್ಲಿ ವೀಕ್ಷಣಾ ಉಪಗ್ರಹವನ್ನು ನಿಯೋಜಿಸಿದರೆ ಅದು ಅತ್ಯಂತ ಕಡಿಮೆ ಇಂಧನದಲ್ಲಿ ನೆಲೆ ನಿಲ್ಲಲು ಸಾಧ್ಯ. ಈ ಪ್ರದೇಶವು ಭೂಮಿಯಿಂದ 15 ಲಕ್ಷ ಕಿಲೋಮೀಟರ್‌ ದೂರದಲ್ಲಿದೆ.
ತೇಜೋಮಂಡಲದ ಅಧ್ಯಯನಕ್ಕಾಗಿ ವಿಸಿಬಲ್‌ ಎಮಿಶನ್‌ ಲೈನ್‌ ಕೊರೊನಾಗ್ರಾಫ್‌ (ವಿಇಎಲ್‌ಸಿ) ಎಂಬ ಉಪಕರಣವನ್ನು ಬೆಂಗಳೂರಿನ ಭಾರತೀಯ ಖಭೌತವಿಜ್ಞಾನ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಸೂರ್ಯನ ಮೇಲ್ಮೈಯ ತಾಪ ಮಾನವು 6,000 ಡಿಗ್ರಿ ಸೆಲ್ಸಿಯಸ್‌ ಇದ್ದರೂ ತೇಜೋಮಂಡಲದ ತಾಪಮಾನವು 10 ಲಕ್ಷ ಡಿಗ್ರಿ ಸೆಲ್ಸಿಯಸ್‌ ವರೆಗೆ ತಲುಪಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ವಿಇಎಲ್‌ಸಿ ಉತ್ತರ ಕಂಡುಕೊಳ್ಳಲಿದೆ ಎಂದು ಇಸ್ರೊ ಹೇಳಿದೆ.

ಎಲ್‌1 ಬಿಂದುವಿನ ಕಕ್ಷೆಯಲ್ಲಿ ಆದಿತ್ಯ ಉಪಗ್ರಹವನ್ನು ಇರಿಸಲಾಗುವುದು. ಕಕ್ಷೆಯಲ್ಲೇ ಸುತ್ತುತ್ತಲೇ ಸೂರ್ಯನ ವಿದ್ಯಮಾನಗಳ ಮೇಲೆ ನಿಗಾ ಇರಿಸಲಿದೆ. ಈ ಉಪಗ್ರಹವನ್ನು ಯು.ಆರ್‌. ರಾವ್‌ ಉಪಗ್ರಹ ಕೇಂದ್ರ ಅಭಿವೃದ್ಧಿಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!