March 7, 2026
Saturday, March 7, 2026
spot_img

ನಮಗೆ ಯಾರ ಅನುಮತಿವೂ ಬೇಕಿಲ್ಲ…ರಷ್ಯಾ ತೈಲ ಖರೀದಿಗೆ ಟ್ರಂಪ್ ಸಮ್ಮತಿ ಕುರಿತು ಭಾರತ ಖಡಕ್ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡದಿಂದಾಗಿ ಹಾರ್ಮುಜ್ ಜಲಸಂಧಿಯ ಮಾರ್ಗವನ್ನು ಇರಾನ್‌ ನಿರ್ಬಂಧಿಸಿದೆ. ಇದರಿಂದಾಗಿ ತೈಲ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಭಾರತ ರಷ್ಯಾದಿಂದ ತೈಲ ಖರೀದಿ ಮಾಡಲು ಮುಂದಾಗಿದೆ.

ಇತ್ತ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ಅವಕಾಶ ನೀಡಲಾಗಿದೆ ಎಂದು ಅಮೆರಿಕ ಹೇಳಿಕೊಂಡಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ ಸರ್ಕಾರ, ಅನುಮತಿ ಮೇಲೆ ನಾವು ಎಂದಿಗೂ ಅವಲಂಬಿತರಾಗಿಲ್ಲ. ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ತೈಲ ನೀಡುವ ಯಾವುದೇ ಮೂಲದಿಂದ ಭಾರತವು ಕಚ್ಚಾ ತೈಲ ಖರೀದಿಸುವುದನ್ನು ಮುಂದುವರಿಸಲಿದೆ ಎಂದು ಹೇಳಿದೆ .

ಹಾರ್ಮುಜ್ ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದರೂ, ಭಾರತದ ಇಂಧನ ಪೂರೈಕೆಯು ಸುರಕ್ಷಿತ ಮತ್ತು ಸ್ಥಿರವಾಗಿದೆ. ಭಾರತವು ತನ್ನ ಕಚ್ಚಾ ತೈಲದ ಮೂಲಗಳನ್ನು 27 ರಿಂದ 40 ದೇಶಗಳಿಗೆ ವಿಸ್ತರಿಸಿದ್ದು, ಪರ್ಯಾಯ ಪೂರೈಕೆ ಮಾರ್ಗಗಳನ್ನು ಖಚಿತಪಡಿಸಿಕೊಂಡಿದೆ. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ, ಕೈಗೆಟುಕುವ ದರಗಳು ಎಲ್ಲಿ ಲಭ್ಯವಿದೆಯೋ ಅಲ್ಲಿಂದ ಭಾರತವು ತೈಲವನ್ನು ಖರೀದಿಸುತ್ತದೆ ಎಂದು ಹೇಳಿದೆ.

2026ರ ಫೆಬ್ರವರಿಯಲ್ಲೂ ಭಾರತವು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಈಗಲೂ ರಷ್ಯಾ ಭಾರತದ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರ ದೇಶವಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಮೂರು ವರ್ಷಗಳ ಅವಧಿಯಲ್ಲಿ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಆಕ್ಷೇಪಣೆಗಳ ಹೊರತಾಗಿಯೂ ಭಾರತವು ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸಿದೆ. ರಿಯಾಯಿತಿ ದರಗಳು ಮತ್ತು ಸಂಸ್ಕರಣಾಗಾರಗಳ ಬೇಡಿಕೆಯಿಂದಾಗಿ 2022ರ ನಂತರ ಆಮದು ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಿದೆ.

ಭಾರತವು ತನ್ನ ಮೀಸಲು ಸಂಗ್ರಹ ಮತ್ತು ಪೂರೈಕೆ ಸರಪಳಿಯಲ್ಲಿ 2.50 ಕೋಟಿ ಬ್ಯಾರೆಲ್‌ಗಳಿಗಿಂತ ಹೆಚ್ಚು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊಂದಿದೆ. ಇದು ಏಳರಿಂದ ಎಂಟು ವಾರಗಳ ಬಳಕೆಗೆ ಸಮನಾದ ಬಫರ್ ಸ್ಟಾಕ್ ಅನ್ನು ಒದಗಿಸುತ್ತದೆ. ಭಾರತದ ಒಟ್ಟು ತೈಲ ಸಂಸ್ಕರಣಾ ಸಾಮರ್ಥ್ಯವು ವಾರ್ಷಿಕ 2.58 ಕೋಟಿ ಮೆಟ್ರಿಕ್ ಟನ್ ಆಗಿದ್ದು, ಇದು ಪ್ರಸ್ತುತ ದೇಶೀಯ ಬೇಡಿಕೆಗಿಂತ ಹೆಚ್ಚಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !