August 21, 2026
Friday, August 21, 2026
spot_img

ಚಂದಿರನ ಅಂಗಳಕ್ಕೆ ಹತ್ತಿರವಾಗಲಿದೆ ಮಾನವಕುಲ: ‘ಆರ್ಟೆಮಿಸ್-2’ ಐತಿಹಾಸಿಕ ಪಯಣಕ್ಕೆ ಕ್ಷಣಗಣನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಶಕಗಳ ಕಾಲದ ಕಾಯುವಿಕೆಗೆ ಈಗ ತೆರೆ ಬೀಳುವ ಸಮಯ ಹತ್ತಿರ ಬಂದಿದೆ. ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟೆಮಿಸ್-2’ ಯೋಜನೆಯಡಿ ಮಾನವ ಸಹಿತ ನೌಕೆ ಚಂದ್ರನತ್ತ ಹಾರಲು ಈಗ ಕ್ಷಣಗಣನೆ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್ 1ರಂದು ಅಮೆರಿಕದ ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಈ ಐತಿಹಾಸಿಕ ಉಡಾವಣೆ ನಡೆಯಲಿದೆ.

ಹವಾಮಾನವು ಶೇ. 80ರಷ್ಟು ಪೂರಕವಾಗಿದ್ದರೂ, ಸೂರ್ಯನಿಂದ ಹೊರಹೊಮ್ಮುತ್ತಿರುವ ತೀವ್ರ ವಿಕಿರಣಗಳು ನಾಸಾ ವಿಜ್ಞಾನಿಗಳಲ್ಲಿ ತುಸು ಆತಂಕ ಮೂಡಿಸಿವೆ. ಹೀಗಾಗಿ, ನಾಸಾ ಈಗ ಸೂರ್ಯನ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿದೆ. ಆದರೆ, ತಾಂತ್ರಿಕವಾಗಿ ಯಾವುದೇ ಅಡಚಣೆಗಳಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಅಮೆರಿಕದ ಕಾಲಮಾನ ಏಪ್ರಿಲ್ 1ರ ಸಂಜೆ 6:24ಕ್ಕೆ ಶಕ್ತಿಯುತ ‘ಸ್ಪೇಸ್ ಲಾಂಚ್ ಸಿಸ್ಟಮ್’ (SLS) ರಾಕೆಟ್ ಮೂಲಕ ‘ಒರಾಯನ್’ ನೌಕೆಯು ಗಗನಕ್ಕೆ ಚಿಮ್ಮಲಿದೆ. ಭಾರತೀಯ ಕಾಲಮಾನದ ಪ್ರಕಾರ ಇದು ಏಪ್ರಿಲ್ 2ರ ಮುಂಜಾನೆ 3:54ಕ್ಕೆ ಸಂಭವಿಸಲಿದೆ.

ಒರಾಯನ್ ನೌಕೆಯಲ್ಲಿ ನಾಲ್ವರು ಗಗನಯಾತ್ರಿಗಳು ಪ್ರಯಾಣಿಸಲಿದ್ದಾರೆ. ಈ ನೌಕೆಯು ಅತ್ಯಂತ ಸುರಕ್ಷಿತವಾಗಿದ್ದು, ಮಾನವರನ್ನು ಚಂದ್ರನ ಕಕ್ಷೆಯವರೆಗೆ ಕೊಂಡೊಯ್ದು, ಅಲ್ಲಿ ಅಧ್ಯಯನ ನಡೆಸಿದ ನಂತರ ಸುರಕ್ಷಿತವಾಗಿ ಭೂಮಿಗೆ ಮರಳಿ ತರುವಂತೆ ವಿನ್ಯಾಸಗೊಳಿಸಲಾಗಿದೆ. ಈ ಇಡೀ ಕಾರ್ಯಾಚರಣೆಯು 10 ದಿನಗಳ ಕಾಲ ನಡೆಯಲಿದ್ದು, ಇದು ಭವಿಷ್ಯದ ಮಂಗಳ ಗ್ರಹದ ಸಂಶೋಧನೆಗಳಿಗೂ ಅಡಿಪಾಯವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !