ಹೊಸದಿಗಂತ ವರದಿ, ಮಂಡ್ಯ :
ತಮಿಳುನಾಡಿಗೆ ವಾಡಿಕೆ ಪ್ರಕಾರ ಬಿಡಬೇಕಾದ ನೀರನ್ನು ಕೇಳಿದ್ದಾರೆ. ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ?. ಈ ಬಗ್ಗೆ ನಾವು ಸಭೆ ನಡೆಸಿ ಚಚಿಸುತ್ತೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಕ್ಯಾತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಳೆಯ ಸಮಸ್ಯೆ ಎದುರಾಗಿದೆ. ಒಂದು ಕಡೆ ಕುಡಿಯಲು ನೀರು ಬೇಕಾಗಿದೆ. ಇನ್ನೊಂದೆಡೆ ಕೇಂದ್ರದ ಮಾನಿಟ್ರಿಂಗ್ ಕಮಿಟಿಯಲ್ಲಿ ತಮಿಳುನಾಡು ನೀರು ಕೇಳಿದೆ. ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ತಮಿಳುನಾಡಿಗೆ ನೀರು ಬಿಡದ ಪರಿಸ್ಥಿತಿ ಇದೆ. ರೈತರ ಬೆಳಗಳಿಗೂ ತೊಂದರೆಯಾಗುತ್ತಿದೆ. ಇದನ್ನು ಸಿಎಂ ಹಾಗೂ ನೀರಾವರಿ ಸಚಿವರ ಜತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಜುಲೈ ಅಂತ್ಯದೊಳಗೆ ಉತ್ತಮ ಮಳೆಯಾಗಲಿದೆ ಎನ್ನುವ ವರದಿ ಇದೆ. ಒಂದು ವೇಳೆ ಮಳೆ ಬಾರದಿದ್ದರೇ ಬರಗಾಲ ಘೋಷಣೆ ಮತ್ತು ಮೋಡ ಬಿತ್ತನೆ ಮಾಡುವ ಬಗ್ಗೆ ರಾಜ್ಯಸರ್ಕಾರ ಅಂತಿಮ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.
ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಆದ್ದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಆಶಾದಾಯಕವಾಗಿ ಇರಬೇಕಾದದ್ದು ಅನಿರ್ವಾಯತೆವಾಗಿದೆ. ಕೆಆರ್‌ಎಸ್ ಡ್ಯಾಂನ ಒಳಹರಿವು ಕೂಡ ಕಡಿಮೆ ಆಗಿದೆ. ಸಮಸ್ಯೆಯಂತು ಇದೆ. ಮಳೆಯೇ ಬರದಿದ್ದಾಗ ಬರಗಾಲ ಘೋಷಣೆ ಮಾಡುವುದು. ಮೋಡ ಬಿತ್ತನೆ ಮಾಡುವ ಬಗ್ಗೆ ಸರ್ಕಾರ ಅಂತಿಮ ಹೆಜ್ಜೆ ಇಡುತ್ತದೆ. ಕ್ಯಾಬಿನೆಟ್ ಉಪ ಸಮಿತಿ ಈಗಾಗಲೇ ಒಂದು ಸಭೆ ಮಾಡಿದೆ. ಕೆಲ ಮಾನದಂಡದ ನಂತರ ಬರಗಾಲ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.