ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ್ ರಾಜ್ಯದ ಸಿಲ್ಕ್ಯಾರಾ ಸುರಂಗ (Silkyara tunnel)ದಲ್ಲಿ 41 ಮಂದಿ ಸಿಲುಕಿಕೊಂಡಿದ್ದಾರೆ. ಅವರನ್ನು ಹೊರ ಕರೆತರಲು ಹರಸಾಹಸ ನಡೆಯುತ್ತಿದೆ.
ಇದರ ನಡುವೆ ಈ ಸುರಂಗ ನಿರ್ಮಾಣ ಕಾರ್ಯದಲ್ಲಿ ಅದಾನಿ ಗ್ರೂಪ್ಗೆ ಸೇರಿದ ಸಂಸ್ಥೆಯೊಂದು ಭಾಗಿಯಾಗಿದೆ ಎಂಬಂತಹ ಸುದ್ದಿ ಕೆಲ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಕುರಿತು ಅದಾನಿ ಗ್ರೂಪ್ ಸ್ಪಷ್ಟನೆ ನೀಡಿದ್ದು, ಸಿಲ್ಕ್ಯಾರಾ ಸುರಂಗ ನಿರ್ಮಾಣದಲ್ಲಿ ತಾನು ಪರೋಕ್ಷವಾಗಿಯಾಗಲೀ ನೇರವಾಗಿಯಾಗಲೀ ಭಾಗಿಯಾಗಿಲ್ಲ ಎಂದು ಹೇಳಿದೆ.
ಸಿಲ್ಕ್ಯಾರಾ ಟನಲ್ ನಿರ್ಮಾಣದಲ್ಲಿ ಭಾಗಿಯಾಗಿರುವ ಕಂಪನಿಯ ಮಾಲೀಕತ್ವವಾಗಲೀ, ಅದರ ಪಾಲುದಾರಿಕೆಯಾಗಲೀ ಅದಾನಿ ಗ್ರೂಪ್ ಹೊಂದಿಲ್ಲ ಎಂದು ಸಂಸ್ಥೆಯು ಹೇಳಿಕೆ ನೀಡಿದೆ.
ಅದಾನಿ ಗ್ರೂಪ್ ಆಗಲೀ ಅಥವಾ ಅದರ ಯಾವುದೇ ಅಂಗ ಸಂಸ್ಥೆಯಾಗಲೀ ಸುರಂಗದ (ಸಿಲ್ಕ್ಯಾರಾ ಟನಲ್) ನಿರ್ಮಾಣದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂದು ಒತ್ತಿಹೇಳಲು ಇಚ್ಛಿಸುತ್ತೇವೆ. ಹಾಗೆಯೇ, ಸುರಂಗ ನಿರ್ಮಾಣದಲ್ಲಿ ಭಾಗಿಯಾದ ಕಂಪನಿಯ ಮಾಲೀಕತ್ವವಾಗಲೀ ಅಥವಾ ಅದರ ಯಾವುದೇ ಪಾಲನ್ನಾಗಲೀ ನಾವು ಹೊಂದಿಲ್ಲ ಎಂದೂ ಸ್ಪಷ್ಟಪಡಿಸುತ್ತಿದ್ದೇವೆ,’ ಎಂದು ಅದಾನಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.
ಸುರಂಗ ಕುಸಿತ ಘಟನೆಗೆ ತಮ್ಮ ಕಂಪನಿಯ ಹೆಸರನ್ನು ತಳುಕು ಹಾಕುತ್ತಿರುವುದನ್ನು ಬಲವಾಗಿ ಖಂಡಿಸಿರುವ ಅದಾನಿ ಗ್ರೂಪ್, ಅದೇ ವೇಳೆ ದುರಂತ ಘಟನೆಯಲ್ಲಿ ಸಿಲುಕಿರುವ ಕಾರ್ಮಿಕರು ಮತ್ತು ಅವರ ಕುಟುಂಬಗಳ ಸುರಕ್ಷತೆಗೆ ಪ್ರಾರ್ಥನೆ ಮಾಡುವುದಾಗಿ ಹೇಳಿದೆ.