ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಉತ್ತಮ ಆಟ ನೀಡುವಲ್ಲಿ ಎಡವಿದ್ದು, ಅದ್ರಲ್ಲೂ 4ನೇ ಕ್ರಮಾಂಕದ ಬ್ಯಾಟಿಂಗ್ ದೊಡ್ಡ ತಲೆನೋವು ತಂದಿದೆ.
ಈ ಕುರಿತು ಖುದ್ದು ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು, ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ನಮಗೆ ಯುವರಾಜ್ ಸಿಂಗ್ ಬಳಿಕ 4ನೇ ಕ್ರಮಾಂಕದಲ್ಲಿ ಅಂತಹ ಮತ್ತೊಬ್ಬ ಬ್ಯಾಟರ್ ನಮಗೆ ಸಿಕ್ಕಿಲ್ಲ ಎಂದು ಶರ್ಮಾ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರೋಹಿತ್ 4ನೇ ಕ್ರಮಾಂಕದ ಸಮಸ್ಯೆ ಬಗ್ಗೆ ಮಾತನಾಡಿದರು. ‘ಯುವರಾಜ್ ಸಿಂಗ್ ಬಳಿಕ ಯಾರಿಗೂ 4ನೇ ಕ್ರಮಾಂಕದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಶ್ರೇಯಸ್ ಅಯ್ಯರ್ ಈ ಸ್ಥಾನದಲ್ಲಿ ಉತ್ತಮ ಆಟವಾಡಿದರೂ, ಗಾಯದ ಸಮಸ್ಯೆಗಳು ಅವರನ್ನು ಬಹುವಾಗಿ ಕಾಡಿವೆ. ಕಳೆದ 4-5 ವರ್ಷಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ. ಪ್ರತಿ ಬಾರಿಯೂ 4ನೇ ಕ್ರಮಾಂಕಕ್ಕೆ ಹೊಸ ಆಟಗಾರನನ್ನು ಹುಡುಕಬೇಕಾಗುತ್ತಿದೆ’ ಎಂದು ಹತಾಶೆಯಿಂದ ನುಡಿದಿದ್ದಾರೆ.
2019ರ ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾ ಪರ 11 ಬ್ಯಾಟರ್‌ಗಳು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಪೈಕಿ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಮಾತ್ರ 10ಕ್ಕಿಂತ ಹೆಚ್ಚು ಬಾರಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದಾರೆ. ಇನ್ನು ಅಪಘಾತದ ಬಳಿಕ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ 2023ರ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನ ಎನಿಸಿದೆ. ಇನ್ನು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್, ಏಕದಿನ ವಿಶ್ವಕಪ್‌ಗೂ ಮುನ್ನ ಸಂಪೂರ್ಣ ಫಿಟ್ ಆಗಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದರು.
ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದು ನಾಲ್ಕು ತಿಂಗಳುಗಳೇ ಕಳೆದಿವೆ. ದೊಡ್ಡ ಗಾಯದ ಸಮಸ್ಯೆ, ಸರ್ಜರಿಗಳು ಆಗಿವೆ. ಇಬ್ಬರು ಆಟಗಾರರು ಸರ್ಜರಿಗೆ ಒಳಗಾಗಿದ್ದಾರೆ. ನಾನೂ ಒಮ್ಮೆ ಸರ್ಜರಿ ಮಾಡಿಸಿಕೊಂಡಿದ್ದೇನೆ. ಸರ್ಜರಿ ಆದ ಬಳಿಕ ಯಾವ ರೀತಿಯಲ್ಲಿ ಅನುಭವವಾಗುತ್ತದೆ, ಎಷ್ಟು ಕಷ್ಟವಾಗುತ್ತದೆ ಎನ್ನುವುದು ನನಗೂ ಗೊತ್ತಿದೆ. ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.
ಏಷ್ಯಾಕಪ್‌ಗೆ ಸದ್ಯದಲ್ಲೇ ತಂಡದ ಆಯ್ಕೆಯಾಗಲಿದೆ ಎಂದಿರುವ ರೋಹಿತ್, ವಿಶ್ವಕಪ್ ಈ ಬಾರಿ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವಿದೆ ಎಂದಿದ್ದಾರೆ. ಏಷ್ಯಾಕಪ್ ಟೂರ್ನಿಗೆ ತನ್ನನ್ನು ಸೇರಿದಂತೆ ಯಾರೊಬ್ಬರು ಆಟೋಮ್ಯಾಟಿಕ್ ಆಯ್ಕೆಯಾಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಏಷ್ಯಾಕಪ್ ಸರಣಿಗೆ ಸಾಕಷ್ಟು ಹೆಸರುಗಳು ನಮ್ಮ ಮುಂದಿವೆ. ವಿಶ್ವಕಪ್ ಟೂರ್ನಿಗೂ ಮುನ್ನ ಯಾವುದು ಸರಿಯಾದ ಸಂಯೋಜನೆಯೋ ಆ ಸಂಯೋಜನೆಯೊಂದಿಗೆ ನಾವು ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತೇವೆ. ನಾವು ಈ ಬಾರಿ ಗೆಲ್ಲಲು ಪ್ರಯತ್ನಿಸುತ್ತೇವೆ. ಅದೇ ರೀತಿ, ಇದೇ ಸಂದರ್ಭ ನಾವು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಆದರೆ ಈ ಏಷ್ಯಾಕಪ್ ಟೂರ್ನಿಯಲ್ಲಿ ಗುಣಮಟ್ಟದ ತಂಡಗಳ ಎದುರು ಒತ್ತಡದ ಪರಿಸ್ಥಿತಿಯಲ್ಲಿ ಬ್ಯಾಟರ್‌ಗಳು ಯಾವ ರೀತಿ ಆಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.