ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ನೀಡಲಾಗುತ್ತಿರುವ ಶಿಷ್ಟಾಚಾರ ಗೌರವವನ್ನು ಮುಂದಿನ ದಿನಗಳಲ್ಲಿ ‘ವಂದೇ ಮಾತರಂ’ ಗೀತೆಗೋ ವಿಸ್ತರಿಸುವ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ವಂದೇ ಮಾತರಂ ರಚನೆಯ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ವಿಷಯ ಮಹತ್ವ ಪಡೆದುಕೊಂಡಿದೆ.
ಮೂಲಗಳ ಮಾಹಿತಿ ಪ್ರಕಾರ, ವಂದೇ ಮಾತರಂ ಮೊಳಗುವ ಸಂದರ್ಭದಲ್ಲೂ ಜನ ಗಣ ಮನದಂತೆ ಎಲ್ಲರೂ ಎದ್ದು ನಿಲ್ಲಬೇಕೇ ಎಂಬ ವಿಚಾರವನ್ನು ಗೃಹ ಸಚಿವಾಲಯ ಪರಿಶೀಲಿಸುತ್ತಿದೆ. ಪ್ರಸ್ತುತ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ–1971 ಕೇವಲ ರಾಷ್ಟ್ರಗೀತೆಗೆ ಮಾತ್ರ ಅನ್ವಯವಾಗುತ್ತದೆ. ಸಂವಿಧಾನದ 51(A) ವಿಧಿಯಲ್ಲೂ ರಾಷ್ಟ್ರಗೀತೆಯನ್ನು ಗೌರವಿಸುವುದು ನಾಗರಿಕರ ಕರ್ತವ್ಯವೆಂದು ಉಲ್ಲೇಖಿಸಲಾಗಿದೆ.
ಈಗಿರುವ ನಿಯಮಗಳ ಪ್ರಕಾರ, ವಂದೇ ಮಾತರಂ ಹಾಡುವಾಗ ಎದ್ದು ನಿಲ್ಲುವುದು ಅಥವಾ ಭಾಗವಹಿಸುವುದು ಕಡ್ಡಾಯವಲ್ಲ. ಇದೇ ನಿಯಮಗಳನ್ನು ವಂದೇ ಮಾತರಂಗೆ ಅನ್ವಯಿಸುವಂತೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್‌ಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಸರ್ಕಾರ ಇದುವರೆಗೆ, ಇಂತಹ ಕಡ್ಡಾಯ ನಿಯಮಗಳು ರಾಷ್ಟ್ರಗೀತೆಗೆ ಮಾತ್ರ ಸೀಮಿತ ಎಂದು ಸ್ಪಷ್ಟಪಡಿಸಿದೆ.




