ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿ ಸುಮಾರು 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದುರಂತದ ನಡುವೆ ಮಂಡಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಶ್ವಾನವೊಂದು ಬೊಗಳಿದ್ದರಿಂದ 20 ಕುಟುಂಬಗಳ 67 ಜನರು ಕೊನೆ ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಜೂನ್ 30 ರಂದು ಮಧ್ಯರಾತ್ರಿ ಮಂಡಿಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಭಾರೀ ಮಳೆಯಾಗುತ್ತಿತ್ತು. ಈ ಗ್ರಾಮದ ನರೇಂದ್ರ ಅವರ ನಿವಾಸದ ಎರಡನೇ ಮಹಡಿಯಲ್ಲಿ ಮಲಗಿದ್ದ ಸಾಕು ನಾಯಿ ಇದ್ದಕ್ಕಿದ್ದಂತೆ ಬೊಗಳಲು ಆರಂಭಿಸಿದೆ.
ರಾತ್ರಿ ಇಷ್ಟೊಂದು ಬೊಗಳದ ನಾಯಿ ಯಾಕೆ ಈ ಪರಿ ಬೊಗಳುವುದನ್ನು ನೋಡಿ ಅಚ್ಚರಿಗೊಂಡು ನರೇಂದ್ರ ಎಚ್ಚರಗೊಂಡಿದ್ದಾರೆ. ನಂತರ ನಾಯಿ ಬೊಗಳಿದ ಜಾಗದ ಬಳಿ ಹೋದಾಗ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಮೂಡಿದ್ದನ್ನು ನೋಡಿದ್ದಾರೆ. ನೋಡುತ್ತಿರುವಾಗಲೇ ಆ ಬಿರುಕಿನ ಮೂಲಕ ನೀರು ಮನೆ ಒಳಗಡೆ ಹರಿಯಲು ಆರಂಭಿಸಿತ್ತು.
ನೀರು ಮನೆಗೆ ನುಗ್ಗಿದೆ ಎಂಬದು ಖಾತ್ರಿ ಆಗುತ್ತಿದ್ದಂತೆ ಕೂಡಲೇ ನಾಯಿಯ ಜೊತೆ ಕೆಳಗಡೆ ಮಲಗಿದ್ದ ಕುಟುಂಬದ ಸದಸ್ಯರನ್ನು ಎಬ್ಬಿಸಿ ಕೂಡಲೇ ಹೊರ ಬರುವಂತೆ ಹೇಳಿದ್ದಾರೆ. ನರೇಂದ್ರ ಅವರು ನಂತರ ಸಮೀಪದಲ್ಲಿ ಇದ್ದ ನೆರೆ ಹೊರೆಯ ನಿವಾಸಿಗಳನ್ನು ಎಬ್ಬಿಸಿ ಮನೆಯಿಂದ ಹೊರ ಬಂದು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಎಷ್ಟೋ ಮಂದಿಯ ಪ್ರಾಣ ಉಳಿದಿದೆ.