ಇತ್ತೀಚಿನ ದಿನಗಳಲ್ಲಿ, ಪೋಷಕರು ತಮ್ಮ ಮೊಬೈಲ್‌ಫೋನ್‌ಗಳಲ್ಲಿ ಮುಳುಗಿದಿರುವುದು ಸಾಮಾನ್ಯ ದೃಶ್ಯವಾಗಿದೆ. ಮನೆಯಲ್ಲಿರಲಿ, ಪಾರ್ಕ್‌ಗಳಲ್ಲಿ ಇರಲಿ ಅಥವಾ ಊಟದ ಸಮಯದಲ್ಲಿ ಇರಲಿ – ಹಲವಾರು ಪೋಷಕರು ತಮ್ಮ ಮಕ್ಕಳೊಂದಿಗೆ ಕಳೆಯಬೇಕಾದ ಸಮಯವನ್ನು ಮೊಬೈಲ್‌ಫೋನ್‌ಗಳತ್ತ ತಿರುಗಿಸಿಬಿಡುತ್ತಿದ್ದಾರೆ. ಆದರೆ ಈ ಚಟವು ಮಕ್ಕಳ ಮೇಲೆ ಎಷ್ಟೊಂದು ಗಂಭೀರ ಪರಿಣಾಮ ಉಂಟುಮಾಡುತ್ತದೆ ಎಂಬ ವಿಷಯವನ್ನು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.
ಮೂಲಭೂತ ಭಾವನಾತ್ಮಕ ಸಂಪರ್ಕ ಕಡಿಮೆ ಆಗುತ್ತದೆ
ತಾಯಿ-ತಂದೆಯರ ಪ್ರೀತಿಯ ಸ್ಪರ್ಶ, ಮಾತುಗಳು ಮತ್ತು ಕಣ್ಣಾಟವೇ ಮಗುವಿಗೆ ಭದ್ರತೆ ಮತ್ತು ಆತ್ಮವಿಶ್ವಾಸವನ್ನು ಕಲಿಸುವ ಅಡಿಪಾಯ. ಆದರೆ ಫೋನ್‌ನಲ್ಲಿ ನಿರಂತರ ಗಮನ ಹರಿಸಿದರೆ ಈ ಭಾವನಾತ್ಮಕ ಸಂಪರ್ಕ ಕಡಿಮೆಯಾಗುತ್ತದೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಕೊರತೆ, ವಿಚಿತ್ರ ವರ್ತನೆ ಮತ್ತು ಒಂಟಿತನದ ಭಾವನೆಗೆ ಕಾರಣವಾಗಬಹುದು.
ಭಾಷಾ ಬೆಳವಣಿಗೆಗೆ ಅಡ್ಡಿ
ಮಕ್ಕಳು ಮಾತನಾಡಲು, ಹೊಸ ಪದಗಳನ್ನು ಕಲಿಯಲು ಪೋಷಕರೊಂದಿಗೆ ಸಂವಹನ ಬಹಳ ಮುಖ್ಯ. ಆದರೆ ಪೋಷಕರು ಫೋನ್‌ನಲ್ಲಿ ನಿರತರಾಗಿರುವಾಗ ಮಕ್ಕಳ ಮಾತುಗಳನ್ನು ಕಡೆಗಣಿಸುವಂತಾಗುತ್ತದೆ. ಈ ಸ್ಥಿತಿಯಲ್ಲಿ ಮಕ್ಕಳು ಮಾತನಾಡುವ ಬದಲು ಮೌನವಾಗಬಹುದು, ಇದರಿಂದ ಭಾಷಾ ಬೆಳವಣಿಗೆ ಕುಂಠಿತವಾಗಬಹುದು.
ವ್ಯತಿರಿಕ್ತ ಮನೋಭಾವ
ಪೋಷಕರ ಗಮನಕ್ಕಾಗಿ ಮಕ್ಕಳು ಅಸಹಜವಾಗಿ ವರ್ತಿಸಬಹುದು. ಪೋಷಕರ ಗಮನ ಸೆಳೆಯಲು ಕೆಟ್ಟ ವರ್ತನೆ, ಕಿರುಚುವುದು, ತಿನ್ನದಿರುವುದು ಇತ್ಯಾದಿಗಳನ್ನು ಮಾಡಬಹುದು. ಇದು ಮುಂದಾಗಿ ವ್ಯತಿರಿಕ್ತ ಮನೋಭಾವ ಹುಟ್ಟಿಸಬಹುದು.
ಆದರ್ಶ ಬೆಳವಣಿಗೆಯ ಕೊರತೆ
ಮಕ್ಕಳು ತಮ್ಮ ಪೋಷಕರನ್ನೇ ಮಾದರಿಯಾಗಿ ಅನುಕರಿಸುತ್ತಾರೆ. ಪೋಷಕರು ತಮ್ಮ ಕಾಲವನ್ನು ಫೋನ್‌ಗಳಲ್ಲಿ ಕಳೆಯುವಂತೆ ಕಂಡುಬಂದರೆ, ಅವರು ಸಹ ಫೋನ್‌ನತ್ತ ಆಕರ್ಷಿತರಾಗುತ್ತಾರೆ. ಇದರ ಪರಿಣಾಮವಾಗಿ ಮಕ್ಕಳು ನಿಖರ ಸಂವಹನ, ಸಮಯದ ಮೌಲ್ಯ, ಜೀವನದ ನೈಜ ಸಂಪರ್ಕಗಳ ಮಹತ್ವವನ್ನು ಅರಿಯದೆ ಹೋಗುತ್ತಾರೆ.
ಮಾನಸಿಕ ಒತ್ತಡದ ಹೆಚ್ಚಳ
ಅಪರ್ಯಾಯ ಸಂಬಂಧಗಳ ಕೊರತೆಯಿಂದಾಗಿ ಮಕ್ಕಳ ಮನಸ್ಸಿನಲ್ಲಿ ಒತ್ತಡ ಉಂಟಾಗಬಹುದು. ಪೋಷಕರಿಂದ ದೂರವಾಗುತ್ತಿರುವ ಭಾವನೆ, ಪ್ರೀತಿಯ ಕೊರತೆಯಿಂದಾಗಿ ಮಕ್ಕಳ ಮನಸ್ಸಿನಲ್ಲಿ ಭಯ, ಕೋಪ ಅಥವಾ ಆತಂಕ ಹೆಚ್ಚಾಗಬಹುದು.
ಮಕ್ಕಳ ಮುಂದೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಕುಟುಂಬದೊಂದಿಗೆ ಒಟ್ಟಾಗಿ ಕಳೆಯುವ ಸಮಯದಲ್ಲಿ ಗ್ಯಾಜೆಟ್‌ಗಳನ್ನು ಬದಿಗೆ ಇಡಬೇಕು. ಮಕ್ಕಳು ಮಾತಾಡುತ್ತಿರುವಾಗ ಗಮನವಿಟ್ಟು ಕೇಳಿ. ಪ್ರತಿ ದಿನ ಕನಿಷ್ಠ 30 ನಿಮಿಷವನ್ನು ಮಕ್ಕಳೊಂದಿಗೆ ಸಂಪೂರ್ಣವಾಗಿ ಕಳೆಯಬೇಕು. ಈ ಪ್ರೀತಿಯ ಸಮಯವೇ ಅವರ ಬೆಳವಣಿಗೆಯ ಆಧಾರವಾಗುತ್ತದೆ.
ತಂತ್ರಜ್ಞಾನ ಉಪಯುಕ್ತವಾಗಿದೆ, ಆದರೆ ಅದಕ್ಕೆ ಮಿತಿಯಿಲ್ಲದ ಬಳಕೆ ಜೀವನದ ನೈಜ ಸಂಬಂಧಗಳಿಗೆ ಹಾನಿಯುಂಟುಮಾಡುತ್ತದೆ. ಪೋಷಕರು ಮೊದಲು ತಮ್ಮ ನಡವಳಿಕೆಯಲ್ಲಿ ಬದಲಾವಣೆ ತರಬೇಕು, ಮಕ್ಕಳ ಭವಿಷ್ಯಕ್ಕಾಗಿ.