ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕಾಶಿಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು 17 ದಿನ ಬಳಿಕ ಸತತ ಕಾರ್ಯಾಚರಣೆಯ ಫಲವಾಗಿ ರಕ್ಷಣೆಯಾಗಿದ್ದು, ಇದೀಗ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ,
ಸುರಂಗದಲ್ಲಿ ಸಿಲುಕಿದ್ದ ಬಹುತೇಕರಿಗೆ ಬದುಕುವ ಆಸೆಯೇ ಕಮರಿ ಹೋಗಿತ್ತು’ ಎಂದು ಆ ಕಾರ್ಮಿಕರ ಪೈಕಿ ಒಬ್ಬನಾದ ರರ್ಖಂಡ್ನ ಶ್ರಮಿಕ ಅನಿಲ್ ಬೇಡಿಯಾ ಹೇಳಿದ್ದಾನೆ.
ದುರಂತದ ಆರಂಭದ ದಿನಗಳಲ್ಲಿ ಚುರುಮುರಿ ತಿಂದು ಹಾಗೂ ಬಂಡೆಗಳಿಂದ ಜಿನುಗುತ್ತಿದ್ದ ನೀರನ್ನು ಚೀಪಿ ದಿನ ತಳ್ಳಿದೆವು. ನಂತರ ಸರ್ಕಾರದಿಂದ ಎಲ್ಲ ಸೌಲಭ್ಯಗಳು ಬರತೊಡಗಿದವು’ ಎಂದು ಕರಾಳ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾನೆ.
ಅದೇ ರೀತಿ ಯೋಗ ಮತ್ತು ಬೆಳಗಿನ ನಡಿಗೆಯ ಮೂಲಕ ಕಾರ್ಮಿಕರು ಧೃತಿಗೆಡದೆ ಚೈತನ್ಯವನ್ನು ಉಳಿಸಿಕೊಂಡಿದ್ದರು ಎಂದು ಕಾರ್ಮಿಕ ಸಬಾ ಅಹಮದ್ ವಿವರಿಸಿದ್ದಾನೆ. ನಾವು ಯಾವತ್ತೂ ಬದುಕುವ ಆಸೆಯನ್ನು ಕಳೆದುಕೊಳ್ಳಲಿಲ್ಲ’ ಎಂದು ಇನ್ನೊಬ್ಬ ಕಾರ್ಮಿಕ ವಿಶಾಲ್ ಹೇಳಿದ್ದಾನೆ.
ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟ ತನ್ನ ಸೋದರನೊಬ್ಬ ಆಗಾಗ ಹೇಳುತ್ತಿದ್ದ ಮಾತುಗಳು ಸುರಂಗದಲ್ಲಿ ಸಿಕ್ಕಿ ಹಾಕಿಕೊಂಡಷ್ಟೂ ದಿನ ಧೈರ್ಯದಿಂದಿರಲು ಪ್ರೇರಣೆಯಾದವು’ ಎಂದು 25 ವರ್ಷದ ಮನ್ಜೀತ್ ಚೌಹಾಣ್ ಎಂಬ ಉತ್ತರ ಪ್ರದೇಶದ ಲಖಿಂಪುರದ ಕಾರ್ಮಿಕ ಹೇಳಿದ್ದಾನೆ.
‘ನಮ್ಮ ಹೆತ್ತವರನ್ನು ನಾವಲ್ಲದೆ ಬೇರೆ ಯಾರು ನೋಡಿಕೊಳ್ಳುತ್ತಾರೆ?’ ಎಂಬ ಸೋದರನ ಮಾತುಗಳು, ಸುರಂಗದಲ್ಲಿದ್ದಷ್ಟು ಕಾಲವೂ ತನ್ನ ಕಿವಿಯಲ್ಲಿ ಗುಂಯ್ಗುಡುತ್ತಿದ್ದವು. ತಂದೆ, ತಾಯಿ ಹಾಗೂ ಇತರ ಕುಟುಂಬ ಸದಸ್ಯರ ಚಿತ್ರ ತನ್ನ ಕಣ್ಣ ಮುಂದೆ ಹಾದು ಹೋಗುತ್ತಿತ್ತು. ತಂದೆ-ತಾಯಿಯ ಚಿತ್ರವನ್ನು ಮೊಬೈಲ್ನ ವಾಲ್ಪೇಪರ್ ಮಾಡಿಕೊಂಡಿದ್ದೆ. ಅದನ್ನು ಪ್ರತಿದಿನ ಅನೇಕ ಬಾರಿ ನೋಡುತ್ತಿದ್ದೆ. ಬದುಕುವ ಆಸೆ ಕಮರದಿರಲು ಅದು ನೆರವಾಯಿತು’ ಎಂದು ಚೌಹಾಣ್ ಭಾವುಕನಾಗಿ ಹೇಳಿದ್ದಾನೆ.