ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ವಲಯಗಳಲ್ಲಿ ಭಾರೀ ಚಟುವಟಿಕೆಗಳು ಜೋರಾಗಿದೆ. ಈ ನಡುವೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮಹಾ ಮೈತ್ರಿಕೂಟಕ್ಕೆ ಹೊಸ ಗೆಲುವಿನ ಸೂತ್ರವನ್ನು ನೀಡುವುದರ ಜೊತೆಗೆ, ಗಂಭೀರ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಎನ್‌ಡಿಎ ವಿರುದ್ಧ ಬಹುಪಕ್ಷೀಯ ಮೈತ್ರಿಕೂಟವನ್ನು ಬಲಪಡಿಸುವ ಉದ್ದೇಶದಿಂದ, ತಮ್ಮ ಪಕ್ಷವು ಆರ್‌ಜೆಡಿ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟವನ್ನು ಸಂಪರ್ಕಿಸಿರುವುದಾಗಿ ಹೇಳಿದ್ದಾರೆ. “ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ಸಿದ್ಧವಾಗಿದ್ದೇವೆ. ಆದರೆ ಮಹಾ ಮೈತ್ರಿಕೂಟ ನಮ್ಮನ್ನು ಸೇರಿಸಿಕೊಂಡರೆ ಮಾತ್ರ ಈ ಗುರಿ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಫಲಿತಾಂಶ ನಮ್ಮ ಕೈಯಲ್ಲಿರುತ್ತದೆ.” ಎಂದು ಓವೈಸಿ ಹೇಳಿದ್ದಾರೆ.
ಎಐಎಂಐಎಂ ಬಿಹಾರ ಘಟಕದ ಅಧ್ಯಕ್ಷ ಅಖ್ತರುಲ್ ಇಮಾನ್ ಕೂಡ ಈ ಮಾತನ್ನು ಪುಷ್ಟಿಪಡಿಸಿ, “ಮೈತ್ರಿಗಾಗಿ ಮಾತುಕತೆ ನಡೆದಿದ್ದರೂ ಇದುವರೆಗೆ ಯಾವುದೇ ಸ್ಪಷ್ಟ ಉತ್ತರ ಬಂದಿಲ್ಲ. ನಮ್ಮ ಪ್ರಸ್ತಾಪ ತಿರಸ್ಕೃತವಾದರೆ, ನಾವು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ” ಎಂದರು. ಇದರಿಂದಾಗಿ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಮತವಿಭಜನೆಯ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ.