January20, 2026
Tuesday, January 20, 2026
spot_img

ಸಿಂಧೂ ಜಲ ಮಾರ್ಗದಲ್ಲಿ ಭಾರತ ಅಣೆಕಟ್ಟು ನಿರ್ಮಿಸಿದರೆ ನಾವು ಬಾಂಬ್ ಸಿಡಿಸುತ್ತೇವೆ: ಪಾಕ್ ಸೇನಾ ಮುಖ್ಯಸ್ಥ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾರತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದೊಂದಿಗಿನ ಮುಂದಿನ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಸ್ತಿತ್ವದ ಬೆದರಿಕೆ ಎದುರಾದರೆ ನಾವು ಅರ್ಧ ಜಗತ್ತನ್ನೇ ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಪಾಕಿಸ್ತಾನ ಪರಮಾಣು ರಾಷ್ಟ್ರ. ನಾವು ಪತನಗೊಳ್ಳುತ್ತಿದ್ದೇವೆ ಎಂದು ಯಾರಾದರೂ ಭಾವಿಸಿದರೆ ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸಿಯೇ ನಾವು ಪತನವಾಗುತ್ತೇವೆ ಎಂಬುದನ್ನು ನೆನಪಿಡಿ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭಾರತವು ಸಿಂಧೂ ಜಲ ಮಾರ್ಗಗಳಲ್ಲಿ ನಿರ್ಮಿಸುವ ಯಾವುದೇ ಮೂಲಸೌಕರ್ಯವನ್ನು ನಾಶಪಡಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ. ನಮ್ಮ ದೇಶದಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ. ಸಿಂಧೂ ಜಲ ಮಾರ್ಗದಲ್ಲಿ ಭಾರತ ಅಣೆಕಟ್ಟು ನಿರ್ಮಿಸಿದರೆ ಅದು ಪಾಕಿಸ್ತಾನಕ್ಕೆ ನೀರಿನ ಹರಿವನ್ನು ತಡೆಯಬಹುದು. ಹಾಗೇನಾದರೂ ಡ್ಯಾಂ ನಿರ್ಮಿಸಿದರೆ ನಾವು ಬಾಂಬ್ ಸಿಡಿಸುತ್ತೇವೆ ಎಂದು ಅವರು ಬೆದರಿಕೆ ಹಾಕಿದ್ದಾರೆ.

ಭಾರತವು ಸಿಂಧೂ ನದಿಗೆ ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ. ಡ್ಯಾಂ ಪೂರ್ಣವಾದ ನಂತರ ನಾವು ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅದು ನಮಗೂ ಸೇರಿದ್ದು. ಅಲ್ಲಾಹ್ ನಮ್ಮೊಂದಿಗಿದ್ದಾನೆ ಎಂದು ಅಸೀಮ್ ಮುನೀರ್ ಹೇಳಿದ್ದಾರೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಕೊನೆಯ ಭೇಟಿಯಲ್ಲಿ ಜೂನ್ 18ರಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅಸೀಮ್ ಮುನೀರ್ ಅವರನ್ನು ಶ್ವೇತಭವನದ ಭೋಜನಕೂಟಕ್ಕೆ ಆಹ್ವಾನಿಸಿದ್ದರು. ಇದಕ್ಕೆ ಭಾರತ ಸೇರಿದಂತೆ ಕೆಲವು ದೇಶಗಳು ಅಸಮಾಧಾನ ವ್ಯಕ್ತಪಡಿಸಿದ್ದವು.

Must Read