ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಣಿಪುರದಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಾರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಮರಳಿ ತರುತ್ತೇವೆ ಎಂದು ಜನರಿಗೆ ಭರವಸೆ ನೀಡುತ್ತೇನೆ ಎಂದರು.
ನಾನು 2004ರಿಂದ ರಾಜಕೀಯದಲ್ಲಿದ್ದೇನೆ. ನಾನು ಮೊದಲ ಬಾರಿಗೆ ಭಾರತದ ಆಡಳಿತ ವ್ಯವಸ್ಥೆ ಕುಸಿದ ರಾಜ್ಯಕ್ಕೆ ಬಂದಿದ್ದೇನೆ.ಅದನ್ನು ನಾವು ಮಣಿಪುರ ಎಂದು ಕರೆಯುತ್ತೇವೆ. ಇಲ್ಲಿ ಹಿಂಸೆ ನಡೆಯುತ್ತಿದ್ದರೂ ಪ್ರಧಾನಿ ಎಲ್ಲಿದ್ದಾರೆ. ನಿನ್ನ ಕಣ್ಣೀರು ಒರೆಸಲು ನಿನ್ನನ್ನು ಅಪ್ಪಿಕೊಳ್ಳಲು ಬಂದಿಲ್ಲ ಎಂದು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತದ ಜನರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀವ್ರ ಅನ್ಯಾಯವನ್ನು ಅನುಭವಿಸುತ್ತಿರುವ ಕಾರಣ ಈ ‘ನ್ಯಾಯ ಯಾತ್ರೆ’ ಆರಂಭಿಸಿದ್ದೇವೆ ಎಂದು ರಾಹುಲ್ ಹೇಳಿದರು.
ಈ ಯಾತ್ರೆಯು ಚುನಾವಣಾ ಯಾತ್ರೆಯಲ್ಲ. ಸೈದ್ಧಾಂತಿಕವಾದುದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.ಮೋದಿ ಸರ್ಕಾರದ 10 ವರ್ಷಗಳ ‘ಅನ್ಯಾಯ’ದ ವಿರುದ್ಧ ಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಪಕ್ಷವು ನಿರುದ್ಯೋಗ, ಹಣದುಬ್ಬರ ಮತ್ತು ಸಾಮಾಜಿಕ ನ್ಯಾಯದಂತಹ ಸಮಸ್ಯೆಗಳನ್ನು ಯಾತ್ರೆಯ ಮೂಲಕ ಪ್ರಸ್ತಾಪಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಯಾವುದೇ ಸ್ಥಳದಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 6,713 ಕಿ.ಮೀ ದೂರ ಪಾದಯಾತ್ರೆ ಮಾಡಲಿದ್ದಾರೆ.ಖೋಂಗ್ಜೋಮ್ ಯುದ್ಧ ಸ್ಮಾರಕದಿಂದ ಯಾತ್ರೆ ಪ್ರಾರಂಭವಾಗುತ್ತಿದ್ದು ಇದು 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ವ್ಯಾಪಿಸಿ 110 ಜಿಲ್ಲೆಗಳನ್ನು ಒಳಗೊಳ್ಳುವ ಮೂಲಕ 6,713 ಕಿಮೀ ದೂರವನ್ನು ಕ್ರಮಿಸಲಿದೆ. 67 ದಿನಗಳ ನಂತರ ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.