ಹೊಸದಿಗಂತ ವರದಿ,ಮಂಡ್ಯ:
ಕೆರಗೋಡಿನಲ್ಲಿ ಧ್ವಜ ವಿವಾದ ಮತ್ತೆ ಸುದ್ದಿಯಲ್ಲಿದ್ದು, ಮಂಡ್ಯದ ಕೆರಗೋಡು ಮತ್ತಿತರರ ಕಡೆಗಳಿಂದ ತೆರಳಿದ್ದ ಕರಸೇವಕರು, ಹನುಮ ಭಕ್ತರು ಅಯೋಧ್ಯೆಯ ಶ್ರೀರಾಮ ಮಂದಿರ ಮುಂಭಾಗದಲ್ಲಿ ಕೆರಗೋಡಿನಲ್ಲಿ ಹನುಮಧ್ವಜ ಕಟ್ಟೇ ಕಟ್ಟುತ್ತೇವೆ ಎಂದು ಶಪಥ ಮಾಡಿದ್ದಾರೆ.
ಫೆ. 17ರಂದು ಮಂಡ್ಯದಿಂದ ಅಯೋಧ್ಯೆಗೆ ರೈಲಿನಲ್ಲಿ ತೆರಳಿದ್ದ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರು, ಕರಸೇವಕರು ಅಯೋಧ್ಯೆಯಲ್ಲಿ ಫೆ. 19 ರಂದು ಸಂಜೆ ಶ್ರೀರಾಮನ ದರುಶನ ಪಡೆದು ಮಂದಿರದಿಂದ ಹೊರ ಬಂದು ದೇವಾಲಯದ ಮುಂಭಾಗ ಕೆರಗೋಡಿನಲ್ಲಿ ಹನುಮಧ್ವಜ ಕಟ್ಟೇ ಕಟ್ಟುತ್ತೇವೆ ಎಂದು ಘೋಷಣೆ ಮೊಳಗಿಸಿದ್ದಾರೆ.
ಶ್ರೀರಾಮ ಮಂದಿರದ ಮುಂಭಾಗದಲ್ಲಿ ಜಮಾಯಿಸಿದ ಕರಸೇವಕರು ಕೆರಗೋಡಿನಲ್ಲಿ ಹನುಮಧ್ವದ ಕಟ್ಟುತ್ತೇವೆ, ಜೈಶ್ರೀರಾಮ್ ಘೋಷಣೆ ಕೂಗುತ್ತಿದ್ದಂತೆ ಉತ್ತರ ಪ್ರದೇಶದ ಭಕ್ತರೂ, ಮಹಿಳೆಯರೂ ಸಹ ಇವರೊಡನೆ ಸೇರಿ ಘೋಷಣೆ ಮೊಳಗಿಸಿದ್ದು ವಿಶೇಷವಾಗಿತ್ತು.
ಕರಸೇವಕರ ಈ ಘೋಷಣೆಯನ್ನು ಉತ್ತರ ಪ್ರದೇಶದ ಭಕ್ತರೇ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಅಯೋಧ್ಯೆಗೆ ತೆರಳಿದ್ದ ಭಕ್ತರು ಫೆ. 23ರ ಬೆಳಗ್ಗೆ ಮಂಡ್ಯಕ್ಕೆ ವಾಪಸ್ಸಾಗಲಿದ್ದಾರೆ.