ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಎದುರು ಪಾಕ್ ನ ಮುಖವಾಡ ಕಳಚಲು ಕೇಂದ್ರ ಸರ್ಕಾರ ನಿಯೋಜಿಸಿರುವ ನಿಯೋಗದಲ್ಲಿ ತಮ್ಮನ್ನು ಸೇರಿಸಿಕೊಂಡಿದ್ದಕ್ಕೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಸಂತೋಷ ವ್ಯಕ್ತಪಡಿಸಿದ್ದಾರೆ.
‘ನಾವು ಭಾರತ ಸರ್ಕಾರ ಮತ್ತು ನಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ. ನಾವು ಬೇರೆ ದೇಶಗಳಿಗೆ ಹೋಗಿ ಪಾಕಿಸ್ತಾನದಿಂದಾಗಿ ನಮ್ಮ ದೇಶದ ಹೆಣ್ಣುಮಕ್ಕಳು ಹೇಗೆ ವಿಧವೆಯರಾಗುತ್ತಿದ್ದಾರೆ, ನಮ್ಮ ಮಕ್ಕಳು ಹೇಗೆ ಅನಾಥರಾಗುತ್ತಿದ್ದಾರೆ ಮತ್ತು ಪಾಕಿಸ್ತಾನವು ನಮ್ಮ ದೇಶವನ್ನು ಹೇಗೆ ಅಸ್ಥಿರಗೊಳಿಸಲು ಬಯಸುತ್ತಿದೆ ಎಂಬುದನ್ನು ಹೇಳುತ್ತೇವೆ’ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ, ಇದನ್ನು ನಾವು ಇಡೀ ಜಗತ್ತಿಗೆ ಹೇಳಬೇಕು. ಇದು ಯಾವುದೇ ಪಕ್ಷಕ್ಕೆ ಸಂಬಂಧಿಸಿದ ವಿಷಯವಲ್ಲ. ವಿದೇಶಕ್ಕೆ ಹೋಗುವ ಮೊದಲು ನಾವು ಸಭೆ ಕೂಡ ನಡೆಸುತ್ತೇವೆ. ಇದು ಒಂದು ದೊಡ್ಡ ಕೆಲಸ. ಈ ಜವಾಬ್ದಾರಿಯನ್ನು ಚೆನ್ನಾಗಿ ಪೂರೈಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಜಗತ್ತಿನ ಮುಂದೆ ಪಾಕಿಸ್ತಾನದ ನಿಜರೂಪವನ್ನು ಬಯಲು ಮಾಡುತ್ತೇವೆ ಎಂದು ಓವೈಸಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಕೇಂದ್ರ ಸರ್ಕಾರವು ವಿದೇಶಿ ರಾಷ್ಟ್ರಗಳಿಗೆ ಭಯೋತ್ಪಾದನಾ ವಿರೋಧಿ ಸರ್ವಪಕ್ಷ ನಿಯೋಗಗಳನ್ನು ಸೇರಿಕೊಂಡಿದ್ದಾರೆ. ಈ ಭೇಟಿಗಳ ಸಮಯದಲ್ಲಿ ಪಾಕಿಸ್ತಾನದ ಉದ್ದೇಶಗಳನ್ನು ವಿದೇಶಿ ಸರ್ಕಾರಗಳಿಗೆ ಬಹಿರಂಗಪಡಿಸುವುದಾಗಿ ಓವೈಸಿ ಹೇಳಿದ್ದಾರೆ.
ಮಾಜಿ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ ಅವರ ಕಾಲದಿಂದಲೂ ಭಾರತವು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ನಲುಗುತ್ತಿದೆ. ಕಂದಹಾರ್ ವಿಮಾನ ಅಪಹರಣ, 26/11 ಮುಂಬೈ ದಾಳಿಗಳು, 2001ರ ಸಂಸತ್ತಿನ ದಾಳಿ, ಉರಿ ಮತ್ತು ಪಠಾಣ್‌ಕೋಟ್ ಘಟನೆಗಳು, ರಿಯಾಸಿ ಮತ್ತು ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಪ್ರವಾಸಿಗರ ಹತ್ಯೆಗಳು ಸೇರಿದಂತೆ ಈ ಇತಿಹಾಸದ ಬಗ್ಗೆ ನಾವು ಜಗತ್ತಿಗೆ ತಿಳಿಸಬೇಕು. ಇದು ಮಾನವೀಯತೆಗೆ ಬೆದರಿಕೆಯಾಗಿದೆ ಎಂದು ಓವೈಸಿ ತಿಳಿಸಿದ್ದಾರೆ.
ಏಳು ನಿಯೋಗಗಳ ನೇತೃತ್ವವನ್ನು 7 ಸಂಸದರು ವಹಿಸಲಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನಿಂದ ಶಶಿ ತರೂರ್, ಬಿಜೆಪಿಯಿಂದ ರವಿಶಂಕರ್ ಪ್ರಸಾದ್, ಜೆಡಿಯುನಿಂದ ಸಂಜಯ್ ಕುಮಾರ್ ಝಾ, ಬಿಜೆಪಿಯಿಂದ ಬೈಜಯಂತ್ ಪಾಂಡಾ, ಡಿಎಂಕೆಯಿಂದ ಕನಿಮೋಳಿ ಕರುಣಾನಿಧಿ, ಎನ್‌ಸಿಪಿಯಿಂದ ಸುಪ್ರಿಯಾ ಸುಳೆ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಸೇರಿದ್ದಾರೆ.