ಹೊಸದಿಗಂತ ಮೈಸೂರು;
ನಾವು ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಈ ನೆಲದ ಕಾನೂನಿನಂತೆ ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ರಾತ್ರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಫೋಕ್ಸೋ ಕಾಯ್ದೆ ಪ್ರಕರಣದಲ್ಲಿ ಕಾಂಗ್ರೆಸ್‌ನವರು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ನಾವು ಯಾವುದೇ ಪ್ರಕರಣದಲ್ಲೂ ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಈ ನೆಲದ ಕಾನೂನಿಗೆ ಗೌರವ ನೀಡಿ, ಅದರಂತೆ ನಡೆದುಕೊಳ್ಳುತ್ತಿದ್ದೇವೆ.
ಬಿ.ಎಸ್.ಯಡಿಯೂರಪ್ಪನವರ ದೂರು ಕೊಟ್ಟಿರುವುದು ಯಾರು, ನಾವು ಕೊಟ್ಟಿಲ್ಲ. ಈ ಪ್ರಕರಣದ ಬಗ್ಗೆ ನ್ಯಾಯಾಲಯ ಏನು ಆದೇಶ ನೀಡುತ್ತದೆಯೋ, ಅದನ್ನು ಗೌರವಿಸಬೇಕು. ಕಾನೂನಿಗೆ ನಾವು ಗೌರವ ಕೊಡ್ತೀವಿ . ಬಿಜೆಪಿಯವರು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ವಿಪಕ್ಷದವರು ಮಾಡುವ ಆರೋಪಗಳಿಗೆಲ್ಲಾ ಉತ್ತರ ಕೊಡಬೇಕಾಗಿಲ್ಲ ಎಂದರು.
ದರ್ಶನ್ ಪರ ಲಾಬಿ ಮಾಡಲು ಯಾರೂ ಬಂದಿಲ್ಲ; ಕೊಲೆ ಆರೋಪದಲ್ಲಿ ಬಂಧಿತರಾಗಿರುವ ಚಿತ್ರ ನಟ ದರ್ಶನ್ ಪರವಾಗಿ ಲಾಬಿ ನಡೆಸಲು ನನ್ನ ಬಳಿ ಯಾರೂ ಬಂದಿಲ್ಲ. ದರ್ಶನ್ ಪರವಾಗಿ ಯಾರೂ ನನತ್ರ ಬಂದಿಲ್ಲ. ಯಾರೂ ಕೂಡ ಒತ್ತಡ ಹೇರಿಲ್ಲ. ಪೊಲೀಸ್ ಠಾಣೆಗೆ ಶಾಮಿಯಾನ ಯಾಕೇ ಹಾಕಿದ್ದಾರೋ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ವಿಧಾನಸಭೆ ಚುನಾವಣೆಗೂ ಮುನ್ನಾ ಬಡವರಿಗೆ ಆರ್ಥಿಕ ಶಕ್ತಿಯನ್ನು ತುಂಬಿ, ಅವರನ್ನು ಮೇಲೆತ್ತಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಗಳು ಬಡವರಿಗೆಂದೇ ಜಾರಿಗೆ ತಂದಿರುವ ಕಾರಣ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಮುಂಗಾರು ಮಳೆ ವಿಫಲವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಮೋಡ ಇದ್ದರೆ ತಾನೇ ಮೋಡ ಬಿತ್ತನೆ ಮಾಡುವುದು. ಹಾಗಾಗಿ ಮುಂದೆ ಪರಿಸ್ಥಿತಿ ಏನಾಗುತ್ತದೋ ನೋಡೋಣ ಎಂದರು.
ಈ ವೇಳೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮತ್ತಿತರರು ಹಾಜರಿದ್ದರು.