ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರ ರಾಜ್ಯವನ್ನು ವಿಭಜಿಸಲು ನಾವು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಾರ್ವಜನಿಕ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯಲ್ಲ. ಮಣಿಪುರ ರಾಜ್ಯವನ್ನು ನಾಶಪಡಿಸುವ ವಿಭಜಕ ಶಕ್ತಿಗಳು ಮತ್ತು ಮಣಿಪುರವನ್ನು ರಕ್ಷಿಸುವ ಶಕ್ತಿಗಳ ನಡುವಿನ ಯುದ್ಧ ಎಂದು ಅಮಿತ್ ಶಾ ಬಣ್ಣಿಸಿದರು.
ಒಂದು ವರ್ಷದಿಂದ ನಾಗರಿಕ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರ ರಾಜ್ಯಕ್ಕೆ ಈ ವರ್ಷ ಅಮಿತ್ ಶಾ ಅವರ ಮೊದಲ ಭೇಟಿ ಇದಾಗಿದೆ. ಯಾರೇ ಏನೇ ಮಾಡಿದರೂ ಮಣಿಪುರವನ್ನು ವಿಭಜಿಸಲು ನಾವು ಬಿಡುವುದಿಲ್ಲ. ಇದು ಬಹಳ ಮುಖ್ಯವಾದ ವಿಚಾರ ಎಂದು ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚುನಾವಣೆಯಲ್ಲ. ಮಣಿಪುರವನ್ನು ವಿಭಜಿಸುವ ಜನರ ಮತ್ತು ಮಣಿಪುರವನ್ನು ರಕ್ಷಿಸುವ ಬಿಜೆಪಿಯ ನಡುವೆ ನಡೆಯುತ್ತಿರುವ ಯುದ್ಧವಾಗಿದೆ. ಕಳೆದ 10 ವರ್ಷಗಳಲ್ಲಿ, ಇದು ಭಾರತವನ್ನು ಶ್ರೀಮಂತ ರಾಷ್ಟ್ರವನ್ನಾಗಿ ಮಾಡಿದ್ದು ಮಾತ್ರವಲ್ಲದೆ ಭದ್ರತೆಯನ್ನು ಸುಧಾರಿಸಿದೆ.
75 ವರ್ಷಗಳಿಂದ ಉಗ್ರಗಾಮಿಗಳು ಮತ್ತು ನಕ್ಸಲ್ ಪಡೆಗಳಿಂದ ನಲುಗಿದ್ದ ಈಶಾನ್ಯ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣವನ್ನು ಮೋದಿ ತಂದಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.